Sunday, November 2, 2025

ವೃದ್ಧನಿಗೆ ಡಿಜಿಟಲ್‌ ಅರೆಸ್ಟ್ ! 51 ಲಕ್ಷ ರೂ. ಕಳೆದುಕೊಂಡ ಕೇಂದ್ರ ಸರ್ಕಾರಿ ನೌಕರ

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಂತ್ರಜ್ಞಾನ ಬೆಳವಣಿಗೆ ಜೀವನ ಸುಲಭಗೊಳಿಸಿದಂತೆ, ಅದನ್ನೇ ದುರುಪಯೋಗಪಡಿಸಿಕೊಳ್ಳುವ ವಂಚಕರ ಸಂಖ್ಯೆಯೂ ಹೆಚ್ಚುತ್ತಿದೆ. ಹೈದರಾಬಾದ್‌ನ ಶ್ರೀನಗರ ಕಾಲೋನಿಯಲ್ಲಿ 78 ವರ್ಷದ ನಿವೃತ್ತ ಕೇಂದ್ರ ಸರ್ಕಾರಿ ನೌಕರರೊಬ್ಬರು ‘ಡಿಜಿಟಲ್ ಅರೆಸ್ಟ್’ ವಂಚನೆಗೆ ಬಲಿಯಾಗಿ 51 ಲಕ್ಷ ರೂಪಾಯಿ ಕಳೆದುಕೊಂಡ ಘಟನೆ ನಡೆದಿದೆ.

ಬಾಂಬ್ ಸ್ಫೋಟದ ಹೆಸರಿನಲ್ಲಿ ಬೆದರಿಕೆ:
ಮುಂಬೈ ಕ್ರೈಂ ಬ್ರಾಂಚ್‌ನ ಎಸಿಪಿ ಎಂದು ಹೇಳಿಕೊಂಡ ವಂಚಕನೊಬ್ಬ, ವೃದ್ಧರಿಗೆ ಕರೆ ಮಾಡಿ “ನಿಮ್ಮ ಮೊಬೈಲ್ ಸಿಮ್ ಕಾರ್ಡ್ ಅನ್ನು ಬಾಂಬ್ ಸ್ಫೋಟ ಮತ್ತು ಅಪಹರಣ ಪ್ರಕರಣಗಳಲ್ಲಿ ಬಳಸಲಾಗಿದೆ” ಎಂದು ಹೇಳಿ ಆತಂಕ ಸೃಷ್ಟಿಸಿದ್ದಾನೆ. ನಂತರ ಸಿಬಿಐ ನೋಟಿಸ್ ತೋರಿಸಿ, ಅಕ್ರಮ ಹಣ ವರ್ಗಾವಣೆ ಆರೋಪವನ್ನೂ ಹೊರಿಸಿದ್ದಾನೆ.

ವಂಚಕನು ವಿಡಿಯೋ ಕಾಲ್ ಮೂಲಕ ಸಂತ್ರಸ್ತರನ್ನು ‘ಡಿಜಿಟಲ್ ಅರೆಸ್ಟ್’ನಲ್ಲಿ ಇರಿಸಿ, ಯಾರಿಗೂ ಸಂಪರ್ಕ ಮಾಡದಂತೆ ತಡೆದಿದ್ದಾನೆ. ಆ ಸಮಯದಲ್ಲಿ ಬ್ಯಾಂಕ್ ವಿವರಗಳನ್ನು ಪಡೆದು, ಖಾತೆಯಲ್ಲಿದ್ದ ಹಣದ ಶೇ.95 ರಷ್ಟು ಮೊತ್ತವನ್ನು ವರ್ಗಾಯಿಸುವಂತೆ ಒತ್ತಾಯಿಸಿದ್ದಾನೆ. ತನಿಖೆ ನಂತರ ಹಣ ಮರಳಿಸಲಾಗುತ್ತದೆ ಎಂದು ಹೇಳಿ ನಂಬಿಸಿದರೂ, ಕೊನೆಯಲ್ಲಿ 51 ಲಕ್ಷ ರೂಪಾಯಿ ವಂಚಿಸಿದ್ದಾನೆ.

ಇದಕ್ಕೂ ಮುನ್ನ ಬೆಂಗಳೂರಿನ ಗಾಂಧಿನಗರ ಪ್ರದೇಶದಲ್ಲಿ ಇದೇ ಮಾದರಿಯ ಘಟನೆ ನಡೆದಿತ್ತು. ಅಲ್ಲಿ ವಂಚಕರು ಮಹಿಳೆಯನ್ನು ಮಕ್ಕಳ ಕಳ್ಳಸಾಗಣೆ ಮತ್ತು ಕೊಲೆ ಪ್ರಕರಣದಲ್ಲಿ ಸಿಲುಕಿದ್ದಾರೆಂದು ಹೇಳಿ ಡಿಜಿಟಲ್ ಅರೆಸ್ಟ್ ಮಾಡಿ ಹಣ ವರ್ಗಾಯಿಸಲು ಬಲವಂತಪಡಿಸಿದ್ದರು.

error: Content is protected !!