ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದ ಮದುವೆ ಕಾನೂನಿನ ಪ್ರಕಾರ, ದಂಪತಿಗಳು ವಿವಾಹದ ನಂತರ ಕಡ್ಡಾಯವಾಗಿ ಮದುವೆ ನೋಂದಣಿ ಮಾಡಿಸಿಕೊಳ್ಳಬೇಕು. ಆದರೆ ಹಿಂದಿನ ಕಾಲದಲ್ಲಿ ಈ ಪ್ರಕ್ರಿಯೆ ಸುಲಭವಾಗಿರಲಿಲ್ಲ. ದಿನಗಟ್ಟಲೆ ಸರ್ಕಾರಿ ಕಚೇರಿಗಳಲ್ಲಿ ಕಾಯಬೇಕಾಗುತ್ತಿತ್ತು, ಅಧಿಕಾರಿಗಳ ತಾಂತ್ರಿಕ ತೊಂದರೆಗಳ ಕಾರಣ ನೋಂದಣಿ ವಿಳಂಬವಾಗುತ್ತಿತ್ತು. ಆದರೆ ಇದೀಗ ಕೇರಳ ಸರ್ಕಾರ ಆ ಪ್ರಕ್ರಿಯೆಗೆ ಡಿಜಿಟಲ್ ಸ್ಪರ್ಶ ನೀಡಿದೆ.
ಇತ್ತೀಚೆಗೆ ಕೇರಳದ ಕವಸ್ಸೆರಿ ಪಂಚಾಯತ್ ವ್ಯಾಪ್ತಿಯಲ್ಲಿರುವ ಲಾವಣ್ಯ ಮತ್ತು ವಿಷ್ಣು ಎಂಬ ನವದಂಪತಿಗಳು ವೀಡಿಯೋ KYC ಮೂಲಕ ತಮ್ಮ ಮದುವೆಯನ್ನು ಕೆಲವೇ ನಿಮಿಷಗಳಲ್ಲಿ ನೋಂದಾಯಿಸಿಕೊಂಡಿದ್ದಾರೆ. ಈ ಘಟನೆ ಕೇರಳದಲ್ಲೇ ಅಲ್ಲ, ದೇಶದಾದ್ಯಂತ ಗಮನ ಸೆಳೆದಿದೆ. ಡಿಜಿಟಲ್ ಯುಗದತ್ತ ಮುನ್ನಡೆಯುತ್ತಿರುವ ಈ ಕ್ರಮವನ್ನು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಡಿಯೋದಲ್ಲಿ, ಪಂಚಾಯತ್ ಅಧಿಕಾರಿ ಅದೇ ದಿನ ನವದಂಪತಿಗಳಿಗೆ ಅವರ ಫೋಟೋ ಸಮೇತ ಡಿಜಿಟಲ್ ಪ್ರಮಾಣಪತ್ರವನ್ನು ನೀಡಿರುವುದು ಕಾಣಸಿಗುತ್ತದೆ.
ಹಿಂದೆ ದಿನಪೂರ್ತಿ ಕಚೇರಿಗಳಲ್ಲಿ ಕಾಯುತ್ತಿದ್ದ ಜನರಿಗೆ ಇದು ನಿಜವಾದ ಕ್ರಾಂತಿಯಾಗಿದ್ದು, ಕೆಲವೇ ನಿಮಿಷಗಳಲ್ಲಿ ಮದುವೆ ನೋಂದಣಿ ಸಾಧ್ಯವಾಗುತ್ತಿದೆ. ಈ ವ್ಯವಸ್ಥೆ ಕೇರಳದ 100% ಸಾಕ್ಷರತೆ ಮತ್ತು ತಂತ್ರಜ್ಞಾನ ನಿಪುಣತೆಗೆ ಸಾಕ್ಷಿಯಾಗಿದೆ ಎಂದು ನೆಟ್ಟಿಗರು ಪ್ರಶಂಸಿಸಿದ್ದಾರೆ. ಒಬ್ಬ ಬಳಕೆದಾರ “ಇದು ನಿಜವಾದ ಡಿಜಿಟಲ್ ಇಂಡಿಯಾ ಮಾದರಿ” ಎಂದು ಬರೆದು ಶ್ಲಾಘಿಸಿದ್ದರೆ, ಮತ್ತೊಬ್ಬ “ಕೇರಳವು ನವೀಕರಣದ ನಿಜವಾದ ಅರ್ಥ ತೋರಿಸಿದೆ” ಎಂದು ಪ್ರತಿಕ್ರಿಯಿಸಿದ್ದಾರೆ.

