ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದ ಪ್ರಮುಖ ಬೀಡಿ ಬ್ರ್ಯಾಂಡ್ ದಿನೇಶ್ ಬೀಡಿಯ ಮಾಲೀಕರಾಗಿದ್ದ ತಂದೆ ಸುರೇಶ್ ಚಂದ್ ಎಂಬುವವರನ್ನು ಮಗನೇ ಕೊಲೆ ಮಾಡಿರುವ ಘಟನೆ ವೃಂದಾವನದಲ್ಲಿ ನಡೆದಿದೆ.
ಕುಡಿತದ ವಿಚಾರವಾಗಿ ಇಬ್ಬರ ನಡುವೆ ಗಲಾಟೆ ನಡೆದಿತ್ತು ಎನ್ನಲಾಗಿದೆ. ಸುರೇಶ್ ಚಂದ್ ಅಗರ್ವಾಲ್ ಎಂಬುವರು ದಿನೇಶ್ 555 ಬೀಡಿ ಮಾಲೀಕರಾಗಿದ್ದರು. 1977ರಲ್ಲಿ ಕಂಪನಿಯನ್ನು ಕಟ್ಟಿದ್ದರು. ಅವರು ಕ್ಯಾನ್ಸರ್ನಿಂದ ಬಳಲುತ್ತಿದ್ದರು. ಅವರ ಮಗ ನರೇಶ್ ಅಗರ್ವಾಲ್ಗೆ ಕುಡಿತದ ಚಟವಿತ್ತು. ಇದು ನಿತ್ಯವೂ ತಂದೆ–ಮಗನ ನಡುವೆ ಗಲಾಟೆಗೆ ಕಾರಣವಾಗುತ್ತಿತ್ತು.
ಶುಕ್ರವಾರ ಸುರೇಶ್ ಚಂದ್ ಹಾಗೂ ನರೇಶ್ ಅಗರ್ವಾಲ್ ನಡುವೆ ದೊಡ್ಡ ಗಲಾಟೆಯೇ ನಡೆದಿತ್ತು. ಕೋಪದಿಂದ ನರೇಶ್ ತನ್ನ ತಂದೆಗೆ ಗುಂಡು ಹಾರಿಸಿದ್ದಾನೆ. ತಾನೇನೋ ಮಾಡಿದೆ ಎನ್ನುವ ಭಯದಲ್ಲಿ ತನ್ನ ಹಣೆಗೆ ತಾನೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ತಂದೆ ಹಾಗೂ ಮಗ ಇಬ್ಬರೂ ಕೂಡ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಪೊಲೀಸರು ತನಿಖೆ ಆರಂಭಿಸಿದ್ದಾರೆ. ಸುರೇಶ್ ಚಂದ್ ಅಗರ್ವಾಲ್ ತಮ್ಮ ಬಹುಕೋಟಿ ಮೌಲ್ಯದ ಬೀಡಿ ವ್ಯವಹಾರವನ್ನು ಬಿಹಾರ, ಜಾರ್ಖಂಡ್, ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶ ಸೇರಿದಂತೆ ಹಲವಾರು ರಾಜ್ಯಗಳಿಗೆ ವಿಸ್ತರಿಸಿದ್ದರು.

