Monday, December 8, 2025

ಪಾಕ್‌ಗೆ ನಿರಾಸೆ, ದಕ್ಷಿಣ ಆಫ್ರಿಕಾಕ್ಕೆ ಸಂಭ್ರಮ: ಮಹಿಳಾ ವಿಶ್ವಕಪ್ ಸೆಮಿಫೈನಲ್‌ಗೆ ಮೂರು ತಂಡಗಳು ಫಿಕ್ಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೊಲಂಬೊದ ಆರ್. ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆದ ನಿರ್ಣಾಯಕ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಮಹಿಳಾ ತಂಡವು ಪಾಕಿಸ್ತಾನದ ವಿರುದ್ಧ 150 ರನ್‌ಗಳ ಬೃಹತ್ ಗೆಲುವು ಸಾಧಿಸುವ ಮೂಲಕ ಪಾಕ್ ತಂಡದ ಮಹಿಳಾ ಏಕದಿನ ವಿಶ್ವಕಪ್ ಅಭಿಯಾನಕ್ಕೆ ತೆರೆ ಎಳೆದಿದೆ. ಈ ಸೋಲಿನೊಂದಿಗೆ ಪಾಕಿಸ್ತಾನ ಸೆಮಿಫೈನಲ್ ರೇಸ್‌ನಿಂದ ಹೊರಬಿದ್ದಿದೆ.

ದಕ್ಷಿಣ ಆಫ್ರಿಕಾ ಅಗ್ರಸ್ಥಾನ, ಸೆಮಿಫೈನಲ್‌ಗೆ ಎಂಟ್ರಿ!

ಪಾಕಿಸ್ತಾನದ ವಿರುದ್ಧದ ಭರ್ಜರಿ ಜಯದೊಂದಿಗೆ ದಕ್ಷಿಣ ಆಫ್ರಿಕಾ ತಂಡವು ಅಂಕಪಟ್ಟಿಯಲ್ಲಿ ಅಗ್ರಸ್ಥಾನವನ್ನು ಅಲಂಕರಿಸಿ ಸೆಮಿಫೈನಲ್‌ಗೆ ಪ್ರವೇಶಿಸಿದೆ. ಇಲ್ಲಿಯವರೆಗೆ 6 ಪಂದ್ಯಗಳನ್ನು ಆಡಿರುವ ಸೌತ್ ಆಫ್ರಿಕಾ 5 ಗೆಲುವು ಮತ್ತು 1 ಸೋಲಿನೊಂದಿಗೆ ಒಟ್ಟು 10 ಅಂಕಗಳನ್ನು ಗಳಿಸಿದೆ.

ಆಸ್ಟ್ರೇಲಿಯಾ, ಇಂಗ್ಲೆಂಡ್‌ಗೂ ಸೆಮಿ ಟಿಕೆಟ್ ಖಚಿತ!

ಅಂಕಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾದ ಜೊತೆಗೆ ಇತರ ಎರಡು ಪ್ರಬಲ ತಂಡಗಳಾದ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ಸಹ ನಾಕೌಟ್ ಹಂತಕ್ಕೆ ಅರ್ಹತೆ ಪಡೆದಿವೆ.

ಆಸ್ಟ್ರೇಲಿಯಾ: 5 ಪಂದ್ಯಗಳಲ್ಲಿ 4 ಗೆಲುವು ಮತ್ತು ಶ್ರೀಲಂಕಾ ವಿರುದ್ಧದ ಮಳೆಯಿಂದ ರದ್ದಾದ ಪಂದ್ಯದ ಒಂದು ಅಂಕದೊಂದಿಗೆ ಒಟ್ಟು 9 ಅಂಕಗಳನ್ನು ಪಡೆದು ಸೆಮಿಫೈನಲ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದೆ.

ಇಂಗ್ಲೆಂಡ್: ದಕ್ಷಿಣ ಆಫ್ರಿಕಾ ವಿರುದ್ಧ ಗೆದ್ದು ವಿಶ್ವಕಪ್ ಅಭಿಯಾನ ಆರಂಭಿಸಿದ ಇಂಗ್ಲೆಂಡ್ ತಂಡ ಇದುವರೆಗೆ ಯಾವುದೇ ಪಂದ್ಯವನ್ನು ಸೋತಿಲ್ಲ. ಪಾಕಿಸ್ತಾನ ವಿರುದ್ಧ ಮಳೆಯಿಂದಾಗಿ ರದ್ದಾದ ಪಂದ್ಯದಿಂದ ಒಂದು ಅಂಕ ಮತ್ತು ಉಳಿದ 4 ಪಂದ್ಯಗಳಲ್ಲಿ ಗೆಲುವಿನೊಂದಿಗೆ ಒಟ್ಟು 9 ಅಂಕಗಳೊಂದಿಗೆ ಸೆಮಿಫೈನಲ್ ತಲುಪಿದೆ.

ನಾಲ್ಕನೇ ಸ್ಥಾನಕ್ಕಾಗಿ ಭಾರತ, ನ್ಯೂಜಿಲೆಂಡ್, ಶ್ರೀಲಂಕಾ ಪೈಪೋಟಿ!

ಇನ್ನುಳಿದ ಒಂದು ಸೆಮಿಫೈನಲ್ ಸ್ಥಾನಕ್ಕಾಗಿ ಭಾರತ, ನ್ಯೂಜಿಲೆಂಡ್ ಮತ್ತು ಶ್ರೀಲಂಕಾ ತಂಡಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಅದರಲ್ಲೂ ಟೀಮ್ ಇಂಡಿಯಾ ತನ್ನ ಮುಂದಿನ ಮಹತ್ವದ ಪಂದ್ಯಗಳನ್ನು ನ್ಯೂಜಿಲೆಂಡ್ ಮತ್ತು ಬಾಂಗ್ಲಾದೇಶ ತಂಡಗಳ ವಿರುದ್ಧ ಆಡಲಿದ್ದು, ಈ ಪಂದ್ಯಗಳ ಫಲಿತಾಂಶ ಭಾರತದ ಸೆಮಿಫೈನಲ್ ಭವಿಷ್ಯವನ್ನು ನಿರ್ಧರಿಸಲಿದೆ.

error: Content is protected !!