ಹೊಸದಿಗಂತ ಡಿಜಿಟಲ್ ಡೆಸ್ಕ್:
ಇರಾನ್ ಹಾಗೂ ಅಮೆರಿಕಾ-ಇಸ್ರೇಲ್ ನಡುವಿನ ಸಂಘರ್ಷಕ್ಕೆ ಸಣ್ಣ ವಿರಾಮ ಸಿಕ್ಕ ಬೆನ್ನಲ್ಲೇ, ಕುವೈಟ್ ಮೂಲದ ಜಝೀರಾ ಏರ್ವೇಸ್ ಮಂಗಳೂರು ವಿಮಾನ ನಿಲ್ದಾಣದಲ್ಲಿ ತನ್ನ ವಿಶೇಷ ಕಾರ್ಯಾಚರಣೆ ನಡೆಸಿದೆ. ಆದರೆ, ಇದರ ಬೆನ್ನಲ್ಲೇ ಕರಾವಳಿ ಪ್ರಯಾಣಿಕರಿಗೆ ಸಂಸ್ಥೆಯು ಆಘಾತಕಾರಿ ಸುದ್ದಿಯೊಂದನ್ನು ನೀಡಿದೆ.
ಪೂರ್ವ ನಿರ್ಧರಿತ ಕಾರ್ಯಾಚರಣೆಯಂತೆ ಕುವೈಟ್ನಿಂದ ಹೊರಟ ಜಝೀರಾ ವಿಮಾನ (ಜೆ9 3417) ಭಾರತೀಯ ಕಾಲಮಾನ ಸಂಜೆ 4.25ಕ್ಕೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಯಶಸ್ವಿಯಾಗಿ ಬಂದಿಳಿಯಿತು. ಕ್ಯಾಪ್ಟನ್ ಜಿಮ್ಮಿ ಮೌಸಾ ನೇತೃತ್ವದಲ್ಲಿ ಬಂದ ಈ ವಿಮಾನದಲ್ಲಿ 11 ಮಕ್ಕಳು ಸೇರಿದಂತೆ ಒಟ್ಟು 181 ಪ್ರಯಾಣಿಕರು ಸ್ವದೇಶಕ್ಕೆ ಮರಳಿದರು. ಬಳಿಕ ಸಂಜೆ 6.10ಕ್ಕೆ ಇಲ್ಲಿಂದ 151 ಪ್ರಯಾಣಿಕರನ್ನು ಹೊತ್ತು ವಿಶೇಷ ವಿಮಾನವು ದಮ್ಮಾಮ್ ಮೂಲಕ ಕುವೈಟ್ಗೆ ಪ್ರಯಾಣ ಬೆಳೆಸಿತು.


ಕಾರ್ಯಾಚರಣೆಯ ಸವಾಲುಗಳ ಹಿನ್ನೆಲೆಯಲ್ಲಿ ಜಝೀರಾ ಏರ್ವೇಸ್ ಮಹತ್ವದ ನಿರ್ಧಾರ ಕೈಗೊಂಡಿದ್ದು, ಏಪ್ರಿಲ್ 10 ರಿಂದ ಮೇ 15ರವರೆಗೆ ಮಂಗಳೂರು ಸೇರಿದಂತೆ ಭಾರತದ 9 ಪ್ರಮುಖ ನಗರಗಳಿಗೆ ವಿಮಾನ ಹಾರಾಟವನ್ನು ರದ್ದುಗೊಳಿಸಿದೆ. ಮಂಗಳೂರು, ಕೊಯಮತ್ತೂರು, ಗೋವಾ, ಕಣ್ಣೂರು, ಕೋಝಿಕ್ಕೋಡ್, ಲಕ್ನೋ, ಮಧುರೈ, ತಿರುಚಿರಾಪಳ್ಳಿ ಮತ್ತು ವಿಜಯವಾಡ ನಗರಗಳಿಗೆ ಈ ರದ್ಧತಿ ಅನ್ವಯವಾಗಲಿದೆ.
“ನಮ್ಮ ನಿಯಂತ್ರಣ ಮೀರಿದ ಕಾರಣಗಳಿಂದಾಗಿ ಈ ಕಠಿಣ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದರಿಂದ ಪ್ರಯಾಣಿಕರಿಗೆ ಉಂಟಾಗುವ ಅನಾನುಕೂಲಕ್ಕೆ ಕ್ಷಮೆಯಾಚಿಸುತ್ತೇವೆ” ಎಂದು ಸಂಸ್ಥೆಯ ಸಿಇಒ ಭರತನ್ ಪಶುಪತಿ ತಿಳಿಸಿದ್ದಾರೆ. ರದ್ದಾದ ವಿಮಾನಗಳಲ್ಲಿ ಬುಕ್ಕಿಂಗ್ ಹೊಂದಿರುವವರಿಗೆ ಪೂರ್ಣ ಹಣ ಮರುಪಾವತಿ ಮಾಡಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ.
ವೆಬ್ಸೈಟ್ ಮೂಲಕ ಬುಕ್ ಮಾಡಿದವರು jazeeraairways.com ಅಧಿಕೃತ ಸೈಟ್ ಅಥವಾ ಆ್ಯಪ್ ಮೂಲಕ ಹಣ ಮರುಪಾವತಿ ಪಡೆಯಬಹುದು.
ಏಜೆಂಟ್ ಮೂಲಕ ಬುಕ್ ಮಾಡಿದವರು ಸಂಬಂಧಪಟ್ಟ ಟ್ರಾವೆಲ್ ಏಜೆಂಟ್ಗಳನ್ನು ಸಂಪರ್ಕಿಸಿ ‘ಕ್ರೆಡಿಟ್ ಶೆಲ್’ ಮೂಲಕ ಮೊತ್ತವನ್ನು ಮರಳಿ ಪಡೆಯಲು ಸೂಚಿಸಲಾಗಿದೆ.
ಭಾರತದ ಇತರ 8 ಸ್ಥಳಗಳಿಗೆ ದಮ್ಮಾಮ್ ಮೂಲಕ ಸೇವೆ ಮುಂದುವರಿಯಲಿದ್ದು, ಪ್ರಯಾಣಿಕರು ವಿಮಾನ ನಿಲ್ದಾಣಕ್ಕೆ ಬರುವ ಮುನ್ನ ತಮ್ಮ ವೇಳಾಪಟ್ಟಿಯನ್ನು ಮತ್ತೊಮ್ಮೆ ಪರಿಶೀಲಿಸಿಕೊಳ್ಳಲು ಸಂಸ್ಥೆ ಕೋರಿದೆ.



