ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಮದುವೆ ಸಂದರ್ಭದಲ್ಲಿ ಮಹಿಳೆ ಗಂಡನಿಗೆ ನೀಡಿರುವ ಬಂಗಾರದ ಆಭರಣ, ಹಣ ಸೇರಿದಂತೆ ಇತರ ವಸ್ತುಗಳನ್ನು ವಿಚ್ಛೇದನದ ಬಳಿಕ ಮುಸ್ಲಿಂ ಮಹಿಳಾ (ವಿಚ್ಛೇದನ ಹಕ್ಕಿನ ರಕ್ಷಣೆ) ಕಾಯ್ದೆ 1986ರ ಅನ್ವಯ ಆತನಿಂದ ಮರಳಿ ಪಡೆಯಬಹುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ನ್ಯಾಯಮೂರ್ತಿ ಸಂಜಯ್ ಕರೊಲ್ ಮತ್ತು ನ್ಯಾಯಮೂರ್ತಿ ಕೋಟೀಶ್ವರ್ ಸಿಂಗ್ ಅವರನ್ನು ಒಳಗೊಂಡ ಪೀಠ , 1986ರ ಕಾಯಿದೆಯ ಉದ್ದೇಶವು ವಿಚ್ಛೇದನದ ನಂತರ ಮುಸ್ಲಿಂ ಮಹಿಳೆಯ ಘನತೆ ಮತ್ತು ಆರ್ಥಿಕ ರಕ್ಷಣೆಯನ್ನು ಭದ್ರಪಡಿಸುವ ಬಗ್ಗೆ ಕಾಳಜಿಯನ್ನು ಹೊಂದಿದೆ. ಇದು ಸಂವಿಧಾನದ 21ನೇ ವಿಧಿಯ ಅಡಿ ಮಹಿಳೆಯ ಹಕ್ಕುಗಳ ರಕ್ಷಣೆ ಮಾಡುವ ಉದ್ದೇಶವನ್ನು ಹೊಂದಿದೆ ಎಂದು ಹೇಳಿದೆ.
ಸಣ್ಣ ಪಟ್ಟಣಗಳು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಅಂತರ್ಗತ ಪಿತೃಪ್ರಧಾನ ತಾರತಮ್ಯವು ಇನ್ನೂ ಸಾಮಾನ್ಯವಾಗಿದೆ ಎಂದು ತೀರ್ಪಿನಲ್ಲಿ ಪೀಠ ಹೇಳಿದೆ. ವಿಚ್ಛೇದನಗೊಂಡ ಮುಸ್ಲಿಂ ಮಹಿಳೆಯು ಮದುವೆ ಸಂದರ್ಭದಲ್ಲಿ ಆಕೆಯ ಪೋಷಕರು ಆಕೆಗೆ ಅಥವಾ ಗಂಡನಿಗೆ ನೀಡಿದ ಕಾಣಿಕೆಗಳನ್ನು ಮರಳಿ ಪಡೆಯಬಹುದು ಎಂದು ಈ ಮೂಲಕ ಸ್ಪಷ್ಟಪಡಿಸಿದೆ.
1896ರ ಸೆಕ್ಷನ್ 3(1) ಕಾಯ್ದೆಯು ಮದುವೆ ಸಂದರ್ಭದಲ್ಲಿ ಮಹಿಳೆಯಗೆ ನೀಡಿದ ವರದಕ್ಷಿಣಿ ಅಥವಾ ಇತರ ಆಸ್ತಿಗಳ ಕುರಿತು ತಿಳಿಸುತ್ತದೆ. ಇದರಲ್ಲಿ ಈ ವಸ್ತುಗಳ ಮೇಲೆ ಸಂಪೂರ್ಣ ಹಕ್ಕನ್ನು ಆಕೆ ಸಾಧಿಸಬಹುದು. ಅದನ್ನು ಆಕೆಯ ಗಂಡನಿಂದ ಮರಳಿ ಪಡೆಯಬಹುದು ಎಂದು ತಿಳಿಸಿದೆ.
ಭಾರತದ ಸಂವಿಧಾನವು ಎಲ್ಲರಿಗೂ ಸಮಾನತೆಯ ಆಶಯವನ್ನು ಹೊಂದಿದೆ. ಆದರೆ ಅದನ್ನು ಇನ್ನೂ ಸ್ಪಷ್ಟವಾಗಿ ಸಾಧಿಸಲಾಗಿಲ್ಲ. ನ್ಯಾಯಾಲಯಗಳು ಈ ನಿಟ್ಟಿನಲ್ಲಿ ತಮ್ಮ ಕೈಲಾದಷ್ಟು ಪ್ರಯತ್ನ ಮಾಡುವಾಗ, ಸಾಮಾಜಿಕ ನ್ಯಾಯದ ತೀರ್ಪಿನಲ್ಲಿ ತಮ್ಮ ತಾರ್ಕಿಕತೆ ನೆಲೆಗೊಳಿಸಬೇಕು ಎಂದು ಪೀಠ ತಿಳಿಸಿದೆ.
ಮಹಿಳೆಯ ವಿಚ್ಛೇದಿತ ಮಾಜಿ ಪತಿಗೆ ಆಕೆಯ ಬ್ಯಾಂಕ್ ಖಾತೆಗೆ 17,67,980 ರೂ.ಗಳನ್ನು ಜಮಾ ಮಾಡುವಂತೆ ನಿರ್ದೇಶಿಸಿತು. ಈ ಮೊತ್ತವನ್ನು ವರದಕ್ಷಿಣೆ , 30 ತೋಲ ಚಿನ್ನದ ಆಭರಣಗಳು ಮತ್ತು ರೆಫ್ರಿಜರೇಟರ್, ಟೆಲಿವಿಷನ್, ಸ್ಟೆಬಿಲೈಸರ್, ಶೋಕೇಸ್, ಬಾಕ್ಸ್ ಬೆಡ್ ಮತ್ತು ಊಟದ ಪೀಠೋಪಕರಣಗಳಂತಹ ಗೃಹೋಪಯೋಗಿ ವಸ್ತುಗಳು ಸೇರಿದಂತೆ ಇತರ ಉಡುಗೊರೆಗಳಿಗಾಗಿ ಲೆಕ್ಕ ಹಾಕಲಾಗಿದೆ.
ಇವುಗಳನ್ನು ಆರು ವಾರಗಳ ಒಳಗೆ ಪಾವತಿ ಮಾಡಬೇಕು. ಈ ಕುರಿತು ಅಫಿಡವಿಟ್ ಸಲ್ಲಿಸಬೇಕು. ಸಕಾಲದಲ್ಲಿ ಪಾವತಿ ಮಾಡದಿದ್ದರೆ, ಪತಿಯು ವಾರ್ಷಿಕ ಶೇ 9ರಷ್ಟು ಬಡ್ಡಿಯನ್ನು ಪಾವತಿಸಬೇಕಾಗುತ್ತದೆ ಎಂದು ಪೀಠ ಸ್ಪಷ್ಟಪಡಿಸಿದೆ.

