Thursday, November 20, 2025

ಎರಡೂವರೆ ವರ್ಷದ ಬಳಿಕ ‘ಅಧಿಕಾರ ಹಸ್ತಾಂತರ’ದ ಚರ್ಚೆಗೆ ಕಿಚ್ಚು ಹಚ್ಚಿದ ಡಿಕೆ ಸುರೇಶ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದು ಎರಡೂವರೆ ವರ್ಷ ಪೂರ್ಣಗೊಂಡ ಬೆನ್ನಲ್ಲೇ, ಮಾಜಿ ಸಂಸದ ಹಾಗೂ ಬಮೂಲ್ ಅಧ್ಯಕ್ಷ ಡಿ.ಕೆ. ಸುರೇಶ್‌ ಅವರು ಮುಖ್ಯಮಂತ್ರಿಗಳಿಗೆ ‘ಕೊಟ್ಟ ಮಾತಿನ ಅಸ್ತ್ರ’ವನ್ನು ಪ್ರಯೋಗಿಸುವ ಮೂಲಕ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ನಾಂದಿ ಹಾಡಿದ್ದಾರೆ. ಇದು ಸಿಎಂ ಮತ್ತು ಕಾಂಗ್ರೆಸ್ ಹೈಕಮಾಂಡ್‌ಗೆ ಸ್ಪಷ್ಟ ಸಂದೇಶ ರವಾನಿಸಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಸದಾಶಿವನಗರದ ತಮ್ಮ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಡಿ.ಕೆ. ಸುರೇಶ್, “ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೂ ಅವರದ್ದೇ ಆದ ಜವಾಬ್ದಾರಿ ಇದೆ. ಅವರು ಕೊಟ್ಟ ಮಾತಿಗೆ ಎಂದಿಗೂ ತಪ್ಪುವುದಿಲ್ಲ,” ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜವಾಬ್ದಾರಿ ಹಸ್ತಾಂತರದ ಚರ್ಚೆ:

ಇತ್ತೀಚೆಗೆ ಅವರು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದ ಹಿನ್ನೆಲೆಯಲ್ಲಿ, “ನೀವು ಅಧಿಕಾರ ಹಸ್ತಾಂತರದ ಬಗ್ಗೆ ಚರ್ಚೆ ಮಾಡಿದಿರಾ?” ಎಂಬ ಪ್ರಶ್ನೆ ಎದುರಾಯಿತು. ಇದಕ್ಕೆ ಸುರೇಶ್ ಅವರು ವಿನಮ್ರವಾಗಿ ಉತ್ತರಿಸಿ, “ನಾನು ಸಿಎಂ ಅವರ ಬಳಿ ಅಧಿಕಾರ ಹಸ್ತಾಂತರದ ವಿಚಾರ ಚರ್ಚೆ ಮಾಡುವಷ್ಟು ದೊಡ್ಡವನಲ್ಲ. ಅವರು ನಮ್ಮ ಹಿರಿಯ ನಾಯಕರು. ಅವರಿಗೆ ರಾಜ್ಯದ ಜನತೆಗೆ ಕೊಟ್ಟ ಭರವಸೆಗಳನ್ನು ಈಡೇರಿಸುವ ಜವಾಬ್ದಾರಿ ಇದೆ,” ಎಂದರು.

ಈ ಸರ್ಕಾರದಲ್ಲಿ ‘ಯಾರಿಗೆ ಯಾವ ಮಾತು ಕೊಟ್ಟಿದ್ದಾರೋ ಅದರಂತೆ ಅವರು ನಡೆಯುತ್ತಾರೆ’ ಎಂದು ಪರೋಕ್ಷವಾಗಿ ಭವಿಷ್ಯದ ನಾಯಕತ್ವ ಬದಲಾವಣೆಯ ಬಗ್ಗೆ ಪ್ರಸ್ತಾಪ ಮಾಡಿದರು.

ಕೊಟ್ಟ ಮಾತು ಉಳಿಸಿಕೊಳ್ಳುವ ವಿಶ್ವಾಸ:

ಕಾಂಗ್ರೆಸ್ ಸರ್ಕಾರ ಎರಡೂವರೆ ವರ್ಷ ಪೂರೈಸಿದ ಬಗ್ಗೆ ಮಾತನಾಡಿದ ಅವರು, “ಇದು ಕರ್ನಾಟಕದ ಜನರ ಆಶೀರ್ವಾದದ ಸರ್ಕಾರ. ಮುಖ್ಯಮಂತ್ರಿಗಳು ಈಗಾಗಲೇ ಕೊಟ್ಟ ಮಾತಿನಂತೆ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಕ್ಕೆ ತಂದಿದ್ದಾರೆ. ಅವರು ಕೊಟ್ಟ ಇತರ ಯಾವುದೇ ಮಾತಿದ್ದರೂ, ಅದರಂತೆ ನಡೆದುಕೊಳ್ಳುತ್ತಾರೆ ಎಂಬ ಸಂಪೂರ್ಣ ವಿಶ್ವಾಸ ನನಗಿದೆ,” ಎಂದು ಪುನರುಚ್ಚರಿಸಿದರು.

ಡಿ.ಕೆ. ಸುರೇಶ್ ಅವರ ಈ ಹೇಳಿಕೆಗಳು, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಎರಡೂವರೆ ವರ್ಷದ ನಂತರ ಮುಖ್ಯಮಂತ್ರಿ ಹುದ್ದೆ ಬಿಟ್ಟುಕೊಡುವ ವಿಚಾರವಾಗಿ ಕಾಂಗ್ರೆಸ್ ನಾಯಕರ ನಡುವೆ ನಡೆದಿದೆ ಎನ್ನಲಾದ ಒಳ ಒಪ್ಪಂದದ ಚರ್ಚೆಗೆ ಮತ್ತಷ್ಟು ಇಂಬು ನೀಡಿದಂತಾಗಿದೆ.

error: Content is protected !!