ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದ ಆರ್ಥಿಕತೆ ಬಗ್ಗೆ ದಾವೋಸ್ನಲ್ಲಿ ನಡೆದ ವರ್ಲ್ಡ್ ಎಕನಾಮಿಕ್ ಫೋರಂನಲ್ಲಿ ಭಾಗಿಯಾಗಿದ್ದ ಕರ್ನಾಟಕ ಡಿಸಿಎಂ ಡಿ.ಕೆ. ಶಿವಕುಮಾರ್ ಆಡಿರುವ ಮಾತುಗಳೀಗ ಬಿಜೆಪಿಗೆ ಅಸ್ತ್ರವಾಗಿ ಮಾರ್ಪಟ್ಟಿದೆ.
ವಿಶ್ವ ಆರ್ಥಿಕ ವೇದಿಕೆಯಲ್ಲಿ ಮಾತನಾಡಿರುವ ಡಿಕೆಶಿ, ಇಂದು ಜಗತ್ತು ಭಾರತವನ್ನು ಹೆಚ್ಚಿನ ವಿಶ್ವಾಸದೊಂದಿಗೆ ನೋಡುತ್ತಿದೆ. ನಮ್ಮ ಸಾಧನೆಗಳ ಮೇಲೂ, ಮುಂದೆ ಸಾಗುತ್ತಿರುವ ನಮ್ಮ ನಿರಂತರ ವೇಗದ ಮೇಲೂ ಜಾಗತಿಕ ವಿಶ್ವಾಸ ಹೆಚ್ಚುತ್ತಿದೆ ಎಂದಿದ್ದರು. ಇದೇ ವಿಚಾರವನ್ನಿಟ್ಟುಕೊಂಡು ಕಾಂಗ್ರೆಸ್ಗೀಗ ಬಿಜೆಪಿ ತಿವಿದಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತದ ಬೆಳವಣಿಗೆ ಎಷ್ಟೊಂದು ವೇಗವಾಗಿದೆ ಎಂಬುದನ್ನು ಈಗ ವಿರೋಧ ಪಕ್ಷವೂ ಸಹ ಒಪ್ಪಿಕೊಳ್ಳಲು ಆರಂಭಿಸಿದೆ. ಒಂದು ಕಡೆ ರಾಹುಲ್ ಗಾಂಧಿ ‘ಭಾರತದ ಆರ್ಥಿಕತೆ ಸತ್ತಿದೆ’ ಎಂಬ ಜಪವನ್ನೇ ಮುಂದುವರಿಸುತ್ತಿರುವಾಗ, ಮತ್ತೊಂದು ಕಡೆ ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿಶ್ವ ಆರ್ಥಿಕ ವೇದಿಕೆಯಲ್ಲಿ ಅದನ್ನು ಖಂಡಿಸಿರೋದನ್ನು ನೋಡುವುದೇ ಸಂತೋಷಕರವಾಗಿದೆ. ಸತ್ತಿರೋದು ಭಾರತದ ಆರ್ಥಿಕತೆಯಲ್ಲ, ನಿಮ್ಮ ಹೈಕಮಾಂಡ್ನ ವಾಸ್ತವದ ಜ್ಞಾನ ಎಂಬುದನ್ನು ದೃಢಪಡಿಸಿದ್ದಕ್ಕೆ ಧನ್ಯವಾದ ಡಿಕೆಶಿ ಅವರೇ ಎಂದು ಬಿಜೆಪಿ ಎಕ್ಸ್ ಪೋಸ್ಟ್ ಮಾಡಿದೆ.
ಮತ್ತೊಂದೆಡೆ ಡಿಕೆಶಿ ಹೇಳೀಕೆ ಬಗ್ಗೆ ಪ್ರತಿಕ್ರಿಯಿಸಿರುವ ವಿಪಕ್ಷ ನಾಯಕ ಆರ್. ಅಶೋಕ್, ಕರ್ನಾಟಕ ಕಾಂಗ್ರೆಸ್‌ನ ಗಾಳಿಯ ದಿಕ್ಕೇ ಬದಲಾಗುತ್ತಿದೆಯೇ? ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ದಾವೋಸ್ನಲ್ಲಿ ಭಾರತ ಪ್ರಕಾಶಿಸುತ್ತಿದೆ ಎಂದು ಹೇಳಿದ್ದಾರೆ.
ಭಾರತದ ಆರ್ಥಿಕತೆ ‘ಸತ್ತ ಆರ್ಥಿಕತೆ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಹಿಂದೆ ಟೀಕಿಸಿದ್ದರು. ಅದಕ್ಕೆ ಬೆಂಬಲ ಸೂಚಿಸಿದ್ದ ವಿಪಕ್ಷ ನಾಯಕ ಹಾಗೂ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ, ಡೊನಾಲ್ಡ್ ಟ್ರಂಪ್ ಸತ್ಯ ಹೇಳಿದ್ದಕ್ಕೆ ಸಂತೋಷವಾಗಿದೆ. ಭಾರತದ ಪ್ರಧಾನಿ ಮತ್ತು ಹಣಕಾಸು ಸಚಿವರನ್ನು ಹೊರತುಪಡಿಸಿ ಎಲ್ಲರಿಗೂ ಭಾರತದ ಆರ್ಥಿಕತೆಯ ಪರಿಸ್ಥಿತಿ ಹೇಗಿದೆ ಎಂಬುದರ ವಾಸ್ತವದ ಅರಿವಿದೆ ಎಂದಿದ್ದರು ಎಂಬುದಿಲ್ಲಿ ಗಮನಾರ್ಹ.


