ಹೊಸದಿಗಂತ ಡಿಜಿಟಲ್ ಡೆಸ್ಕ್:
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಇಂದು ಬೆಂಗಳೂರಿನ ಜನರ ಸಮಸ್ಯೆಗಳನ್ನು ಆಲಿಸುವ ಉದ್ದೇಶದಿಂದ ‘ಬೆಂಗಳೂರು ನಡಿಗೆ’ ಕಾರ್ಯಕ್ರಮಕ್ಕೆ ಲಾಲ್ಬಾಗ್ನಲ್ಲಿ ಚಾಲನೆ ನೀಡಿದ್ದಾರೆ. ಮುಂದಿನ 6 ದಿನಗಳವರೆಗೆ 6 ಪ್ರಮುಖ ಉದ್ಯಾನಗಳಲ್ಲಿ ಬೆಳಿಗ್ಗೆ ಒಂದು ತಾಸು ನಡಿಗೆ ಮತ್ತು ನಂತರ ಒಂದು ತಾಸು ಸಾರ್ವಜನಿಕರೊಂದಿಗೆ ಸಂವಾದ ನಡೆಸಿ ಅಭಿಪ್ರಾಯ ಸಂಗ್ರಹಿಸಲಿದ್ದಾರೆ.
ಇಂದಿನ ಲಾಲ್ಬಾಗ್ ನಡಿಗೆಯಲ್ಲಿ ಡಿಸಿಎಂ ಜೊತೆ ಸಾರ್ವಜನಿಕರು ಭಾಗವಹಿಸಿ, ನಗರದ ಮುಖ್ಯ ಸಮಸ್ಯೆಗಳಾದ ಹಾಳಾದ ರಸ್ತೆಗಳು, ಕಸದ ಸಮರ್ಪಕ ವಿಲೇವಾರಿ, ಆ್ಯಂಬುಲೆನ್ಸ್ ಸಂಚಾರಕ್ಕೆ ಅನುಕೂಲ ಮತ್ತು ಉದ್ದೇಶಿತ ಟನಲ್ ರಸ್ತೆಯ ಬಗ್ಗೆ ಚರ್ಚೆ ನಡೆಸಿದರು.
ಕಸಕ್ಕೆ ದಂಡ, ಲಾಲ್ಬಾಗ್ಗೆ ಸಿ.ಸಿ.ಟಿ.ವಿ. ಭರವಸೆ:
ರಾಜ್ಯದಲ್ಲಿ ಕಸದ ಸಮಸ್ಯೆ ಹೆಚ್ಚುತ್ತಿದ್ದು, ಎಲ್ಲೆಂದರಲ್ಲಿ ಕಸ ಎಸೆಯುವವರಿಗೆ ಕಠಿಣ ದಂಡ ವಿಧಿಸುವಂತೆ ಸಾರ್ವಜನಿಕರು ಉಪಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು, ಲಾಲ್ಬಾಗ್ನಲ್ಲಿ ಹೆಣ್ಣು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಓಡಾಡುವುದರಿಂದ ಅವರ ಸುರಕ್ಷತೆಗೆ ಸಿ.ಸಿ. ಕ್ಯಾಮೆರಾಗಳ ಅವಶ್ಯಕತೆ ಇದೆ. ಆದ್ದರಿಂದ ಲಾಲ್ಬಾಗ್ ಅಭಿವೃದ್ಧಿಗೆ ವೈಯಕ್ತಿಕವಾಗಿ ₹10 ಕೋಟಿ ರೂ.ಗಳನ್ನು ನೀಡುವುದಾಗಿ ಘೋಷಿಸಿದರು.
ಈ ‘ಬೆಂಗಳೂರು ನಡಿಗೆ’ ಕಾರ್ಯಕ್ರಮದ ಮೂಲಕ ಜನರ ಅಹವಾಲುಗಳನ್ನು ನೇರವಾಗಿ ಆಲಿಸಿ, ನಗರದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಭರವಸೆಯನ್ನು ಡಿಸಿಎಂ ನೀಡಿದ್ದಾರೆ.