Friday, November 28, 2025

ಡಿಕೆಶಿ 5 ವರ್ಷ ಸಿಎಂ ಆಗಲಿ: ಸಿಎಂ ಗಾದಿ ಸಮರಕ್ಕೆ ‘ರಾಜಣ್ಣ’ ಹೊಸ ಕಿಡಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕರ್ನಾಟಕದಲ್ಲಿ ಮುಖ್ಯಮಂತ್ರಿ ಕುರ್ಚಿಗಾಗಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡುವೆ ನಡೆಯುತ್ತಿರುವ ‘ಗಾದಿ ಸಮರ’ ಮತ್ತಷ್ಟು ತೀವ್ರಗೊಂಡಿದೆ. ಎರಡೂ ನಾಯಕರ ಬೆಂಬಲಿಗ ಶಾಸಕರು ಹಾಗೂ ಸಚಿವರು ಪರ-ವಿರೋಧ ಹೇಳಿಕೆಗಳ ಮೂಲಕ ತಮ್ಮ ನಾಯಕರ ಬಣವನ್ನು ಬಲಪಡಿಸುತ್ತಿದ್ದಾರೆ. ಈ ಹಗ್ಗಜಗ್ಗಾಟದ ನಡುವೆಯೇ, ಮಾಜಿ ಸಚಿವ ಹಾಗೂ ಸಿದ್ದರಾಮಯ್ಯ ಆಪ್ತ ಕೆ.ಎನ್. ರಾಜಣ್ಣ ಅವರು ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿಯಲ್ಲಿ ಸ್ಫೋಟಕ ಹೇಳಿಕೆ ನೀಡುವ ಮೂಲಕ ಹೊಸ ಚರ್ಚೆಗೆ ನಾಂದಿ ಹಾಡಿದ್ದಾರೆ.

ಡಿಕೆಶಿ 5 ವರ್ಷ ಸಿಎಂ ಆಗಲಿ: ರಾಜಣ್ಣ ಆಶಯ

ರಾಜಣ್ಣ ಅವರು, “ಎಲ್ಲರೂ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಮುಂದಿನ ಚುನಾವಣೆಗೆ ಹೋಗೋಣ. ಬಹುಮತ ತಂದು ಡಿ.ಕೆ. ಶಿವಕುಮಾರ್ 5 ವರ್ಷಗಳ ಕಾಲ ಮುಖ್ಯಮಂತ್ರಿಯಾಗಲಿ” ಎಂದು ನೇರ ಹೇಳಿಕೆ ನೀಡಿದ್ದಾರೆ. ಈ ಮಾತುಗಳು ಡಿಕೆಶಿ ಪಾಳಯದಲ್ಲಿ ಸಂಚಲನ ಮೂಡಿಸಿವೆ.

’30-30 ತಿಂಗಳ ಒಪ್ಪಂದ ಸುಳ್ಳು, ಹೈಕಮಾಂಡ್ ಹಸ್ತಕ್ಷೇಪ ಬೇಡ’

ಇದೇ ವೇಳೆ, ಹಾಲಿ ಸಿಎಂ ಸಿದ್ದರಾಮಯ್ಯ ಅವರ ಅಧಿಕಾರಾವಧಿಯ ಬಗ್ಗೆ ಮಾತನಾಡಿ, “ಶಾಸಕಾಂಗ ಪಕ್ಷದ ಸಭೆಯಲ್ಲಿ ಸಿದ್ದರಾಮಯ್ಯನವರನ್ನು ಆಯ್ಕೆ ಮಾಡಲಾಗಿದೆ. ಈಗ ಸಿಎಲ್‌ಪಿ ಸಭೆಯಲ್ಲೇ ತೀರ್ಮಾನ ಆಗಬೇಕು. ಸಿಎಲ್‌ಪಿ ಸಭೆಯಲ್ಲಿ ಯಾರಾದರೂ ರಾಜೀನಾಮೆ ಕೊಡಬೇಕು ಎಂದು ಹೇಳಿದ್ದಾರಾ? 30-30 ತಿಂಗಳ ಒಪ್ಪಂದ ಎಂದು ಸುಮ್ಮನೆ ಹೇಳುತ್ತಾರೆ. ನಾಯಕತ್ವದ ಬಗ್ಗೆ ಹೈಕಮಾಂಡ್ ಮಾತಾಡಬಾರದು” ಎಂದು ಒಪ್ಪಂದದ ವರದಿಗಳನ್ನು ಅಲ್ಲಗಳೆದಿದ್ದಾರೆ.

ಸಿದ್ದರಾಮಯ್ಯ ನಂತರ ಡಾ. ಜಿ. ಪರಮೇಶ್ವರ್ ಸಿಎಂ ಆಗಲಿ!

ರಾಜಣ್ಣ ಅವರ ವೈಯಕ್ತಿಕ ಆಶಯದ ಬಗ್ಗೆ ಕೇಳಿದಾಗ, “ನನ್ನ ವೈಯಕ್ತಿಕ ಆಶಯ ಸಿದ್ದರಾಮಯ್ಯನವರು 5 ವರ್ಷ ಸಿಎಂ ಆಗಿರಬೇಕು” ಎಂದಿದ್ದಾರೆ. ಆದರೆ, ಇದಕ್ಕೊಂದು ಅನಿರೀಕ್ಷಿತ ತಿರುವು ನೀಡಿ, “2013ರ ಚುನಾವಣೆಯಲ್ಲಿ ಡಾ.ಜಿ. ಪರಮೇಶ್ವರ್ ಅವರು ಪಕ್ಷವನ್ನು ಅಧಿಕಾರಕ್ಕೆ ತಂದರು. ಡಿ.ಕೆ. ಶಿವಕುಮಾರ್ ಕೂಲಿ ಕೇಳಿದಂತೆ, ಪರಮೇಶ್ವರ್ ಕೂಡ ಕೂಲಿ ಕೇಳಬೇಕಲ್ಲವೇ? ಮೊದಲು ಡಾ.ಜಿ. ಪರಮೇಶ್ವರ್ ಅವರ ಹಳೇ ಕೂಲಿ ಕ್ಲಿಯರ್ ಆಗಲಿ. ಅನಿವಾರ್ಯತೆ ಬಂದರೆ ಡಾ.ಜಿ. ಪರಮೇಶ್ವರ್ ಅವರು ಸಿಎಂ ಆಗಲಿ, ಇದು ನನ್ನ ಅಭಿಪ್ರಾಯ” ಎಂದು ಹೇಳುವ ಮೂಲಕ ಸಿಎಂ ಹುದ್ದೆಯ ರೇಸ್‌ಗೆ ಡಾ. ಜಿ. ಪರಮೇಶ್ವರ್ ಅವರ ಹೆಸರನ್ನು ಸೇರಿಸಿದ್ದಾರೆ.

ಈ ಹೇಳಿಕೆಗಳು ಕಾಂಗ್ರೆಸ್ ವಲಯದಲ್ಲಿ ಮತ್ತೊಂದು ಸುತ್ತಿನ ಚರ್ಚೆ ಹಾಗೂ ಗೊಂದಲಕ್ಕೆ ಕಾರಣವಾಗಿದ್ದು, ಸಿದ್ದರಾಮಯ್ಯ-ಡಿಕೆಶಿ ಜಟಾಪಟಿಯ ನಡುವೆ ಪರಮೇಶ್ವರ್ ಅವರ ಹೆಸರು ಮುನ್ನೆಲೆಗೆ ಬಂದಿರುವುದು ಹೊಸ ರಾಜಕೀಯ ಬೆಳವಣಿಗೆಗೆ ಕಾರಣವಾಗಿದೆ.

error: Content is protected !!