ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಹಿನ್ನೆಲೆಯಲ್ಲಿ ಅಡುಗೆ ಅನಿಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಬಹುದು ಎಂಬ ಆತಂಕ ಸಾರ್ವಜನಿಕರಲ್ಲಿ ಮನೆಮಾಡಿದೆ. ಈ ಹಿನ್ನೆಲೆಯಲ್ಲಿ ಜನರು ಮುನ್ನೆಚ್ಚರಿಕೆ ಕ್ರಮವಾಗಿ ಅನಗತ್ಯವಾಗಿ ಸಿಲಿಂಡರ್ ಬುಕ್ ಮಾಡುತ್ತಿರುವುದು ಕಂಡುಬರುತ್ತಿದೆ. ಆದರೆ, ಈ ಬಗ್ಗೆ ಸ್ಪಷ್ಟನೆ ನೀಡಿರುವ ಇಂಡಿಯನ್ ಆಯಿಲ್ ಸಂಸ್ಥೆ, ದೇಶದಲ್ಲಿ ಎಲ್ಪಿಜಿ ಲಭ್ಯತೆ ಸ್ಥಿರವಾಗಿದೆ, ಯಾರೂ ಆತಂಕಕ್ಕೊಳಗಾಗಿ ಮುಂಗಡ ಬುಕ್ಕಿಂಗ್ ಮಾಡಬೇಡಿ ಎಂದು ಅಡ್ವೈಸರಿ ಹೊರಡಿಸಿದೆ.
ಸಾಮಾನ್ಯವಾಗಿ ಸಿಲಿಂಡರ್ ಖಾಲಿಯಾಗುವ ಮುನ್ನವೇ ಜನರು ರೀಫಿಲ್ ಬುಕ್ ಮಾಡುತ್ತಿರುವುದರಿಂದ ಮಾರುಕಟ್ಟೆಯಲ್ಲಿ ಕೃತಕ ಬೇಡಿಕೆ ಸೃಷ್ಟಿಯಾಗುತ್ತಿದೆ. ಇದರಿಂದಾಗಿ ನಿಜವಾಗಿ ಅನಿಲದ ಅಗತ್ಯವಿರುವವರಿಗೆ ಸಕಾಲದಲ್ಲಿ ಡೆಲಿವರಿ ನೀಡಲು ವಿಳಂಬವಾಗುತ್ತಿದೆ ಎಂದು ಸಂಸ್ಥೆ ತಿಳಿಸಿದೆ.
ವರ್ಷದ ಬಳಿಕ ಮೊದಲ ಬಾರಿಗೆ ಗೃಹಬಳಕೆಯ ಎಲ್ಪಿಜಿ ದರದಲ್ಲಿ ಏರಿಕೆಯಾಗಿದ್ದು, ಗ್ರಾಹಕರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. 14.2 ಕೆಜಿ ತೂಕದ ಸಿಲಿಂಡರ್ ದರದಲ್ಲಿ 60 ರೂ. ಹೆಚ್ಚಳವಾಗಿದ್ದು, ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪ್ರತಿ ಸಿಲಿಂಡರ್ ಬೆಲೆ 915.50 ರೂ. ತಲುಪಿದೆ.
ಭಾರತಕ್ಕೆ ಆಮದಾಗುವ ಬಹುಪಾಲು ಎಲ್ಪಿಜಿ ಹಾರ್ಮುಜ್ ಜಲಸಂಧಿಯ ಮೂಲಕವೇ ಬರಬೇಕಿದೆ. ಪ್ರಸ್ತುತ ಯುದ್ಧದ ಸನ್ನಿವೇಶದಿಂದಾಗಿ ಅಲ್ಲಿ ಸಂಚಾರ ದುಸ್ತರವಾಗಿದೆ. ಆದರೂ ಭಾರತ ಸರ್ಕಾರವು ರಾಜತಾಂತ್ರಿಕವಾಗಿ ಇರಾನ್ ಜೊತೆ ಮಾತುಕತೆ ನಡೆಸಿ, ಒಂದೊಂದೇ ಟ್ಯಾಂಕರ್ಗಳನ್ನು ಸುರಕ್ಷಿತವಾಗಿ ತರಿಸಿಕೊಳ್ಳುತ್ತಿದೆ. ಈಗಾಗಲೇ ಮೂರು ಟ್ಯಾಂಕರ್ಗಳು ಭಾರತ ತಲುಪಿದ್ದು, ಮತ್ತೊಂದು ನಾಳೆ ಬರುವ ನಿರೀಕ್ಷೆಯಿದೆ.
ಪರ್ಷಿಯನ್ ಕೊಲ್ಲಿಯಲ್ಲಿ ಭಾರತೀಯ ನೌಕೆಗಳ ರಕ್ಷಣೆಗಾಗಿ ಎರಡು ಯುದ್ಧ ನೌಕೆಗಳ ಕಾರ್ಯಪಡೆಗಳನ್ನು ನಿಯೋಜಿಸಲಾಗಿದೆ. ಪೂರೈಕೆ ಸರಪಳಿ ತುಂಡಾಗದಂತೆ ಸರ್ಕಾರ ಸಕಲ ಕ್ರಮಗಳನ್ನು ಕೈಗೊಂಡಿರುವುದರಿಂದ, ಗ್ರಾಹಕರು ಗಾಳಿ ಸುದ್ದಿಗೆ ಕಿವಿಗೊಡದೆ ಸಹಕರಿಸಲು ಕೋರಲಾಗಿದೆ.



