ಇಂದಿನ ಯುವಕರ ದಿನನಿತ್ಯದ ಜೀವನದಲ್ಲಿ ಇಯರ್‌ಬಡ್ಸ್ ಮತ್ತು ಇಯರ್‌ಫೋನ್‌ಗಳು ಅವಿಭಾಜ್ಯ ಭಾಗವಾಗಿವೆ. ಬಸ್‌ನಲ್ಲಿ ಪ್ರಯಾಣಿಸುವಾಗ, ಬೈಕ್ ಓಡಿಸುವಾಗ, ರಸ್ತೆ ದಾಟುವಾಗ ಅಥವಾ ಕೆಲಸ ಮಾಡುತ್ತಿರುವಾಗಲೂ ಕಿವಿಯಲ್ಲಿ ಇಯರ್‌ಬಡ್ಸ್ ಇರಲೇಬೇಕು ಎಂಬ ಅಭ್ಯಾಸ ಬೆಳೆದುಕೊಂಡಿದ್ದಾರೆ. ಆದರೆ ಈ ಅತಿಯಾದ ಬಳಕೆ ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ ಎಂದು ತಜ್ಞರು ಎಚ್ಚರಿಕೆ ನೀಡುತ್ತಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆಯ ವರದಿಯ ಪ್ರಕಾರ, 12ರಿಂದ 35 ವರ್ಷದೊಳಗಿನ ಸುಮಾರು ಒಂದು ಬಿಲಿಯನ್ ಜನರು ಶ್ರವಣ ದೋಷಕ್ಕೆ ಒಳಗಾಗುವ ಅಪಾಯದಲ್ಲಿದ್ದಾರೆ. ಹೆಚ್ಚಿನ ಶಬ್ದದಲ್ಲಿ ಹಾಡುಗಳನ್ನು ಕೇಳುವುದು, ದೀರ್ಘಕಾಲದವರೆಗೆ ಇಯರ್‌ಬಡ್ಸ್ ಬಳಸುವುದು ಕಿವಿಯ ಶ್ರವಣ ವ್ಯವಸ್ಥೆಗೆ ನೇರ ಹಾನಿ ಉಂಟುಮಾಡುತ್ತದೆ. 85 ಡೆಸಿಬಲ್‌ಗಳಿಗಿಂತ ಹೆಚ್ಚಿನ ಶಬ್ದವನ್ನು ನಿರಂತರವಾಗಿ ಕೇಳುವುದರಿಂದ ಶಾಶ್ವತ ಶ್ರವಣ ನಷ್ಟವಾಗುವ ಸಾಧ್ಯತೆ ಇದೆ ಎಂದು ಅಧ್ಯಯನಗಳು ಬಹಿರಂಗಪಡಿಸಿವೆ.

ಇಯರ್‌ಬಡ್ಸ್‌ಗಳನ್ನು ನಿರಂತರವಾಗಿ ಧರಿಸುವುದರಿಂದ ಕಿವಿಯೊಳಗೆ ತೇವಾಂಶ ಹೆಚ್ಚಾಗಿ, ಬ್ಯಾಕ್ಟೀರಿಯಾ ಸೋಂಕು ಉಂಟಾಗುವ ಸಾಧ್ಯತೆ ಇದೆ. ಮಧುಮೇಹಿಗಳಲ್ಲಿ ಈ ಸೋಂಕು ಗಂಭೀರವಾಗಬಹುದು. ಅಲ್ಲದೆ, ವಿದ್ಯುತ್ಕಾಂತೀಯ ಅಲೆಗಳಿಂದ ಕಿವಿಯ ನರಗಳು ದುರ್ಬಲಗೊಳ್ಳುವ ಅಪಾಯವಿದೆ. ಇದರಿಂದ ತಲೆತಿರುಗುವಿಕೆ, ತಲೆನೋವು, ವಾಂತಿ, ಹಾಗೂ ರಕ್ತದೊತ್ತಡ ಹೆಚ್ಚುವಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ ಎಂದು ತಜ್ಞರು ಹೇಳಿದ್ದಾರೆ.

ತಜ್ಞರು “60-60 ನಿಯಮ” ಅನುಸರಿಸಲು ಸಲಹೆ ನೀಡುತ್ತಾರೆ. ಅಂದರೆ ದಿನಕ್ಕೆ ಗರಿಷ್ಠ 60 ನಿಮಿಷಕ್ಕಿಂತ ಹೆಚ್ಚು ಕಾಲ ಸಂಗೀತ ಕೇಳಬಾರದು ಹಾಗೂ ವಾಲ್ಯೂಮ್ ಶೇಕಡಾ 60 ಕ್ಕಿಂತ ಹೆಚ್ಚಿರಬಾರದು. ಪ್ರತಿ 10-15 ನಿಮಿಷಗಳಿಗೊಮ್ಮೆ ವಿರಾಮ ನೀಡುವುದರಿಂದ ಶ್ರವಣ ಶಕ್ತಿ ಕಾಪಾಡಲು ಸಹಾಯಕವಾಗುತ್ತದೆ. ಇಯರ್‌ಬಡ್ಸ್‌ಗಿಂತ ಹೆಡ್‌ಫೋನ್‌ಗಳು ಉತ್ತಮ ಆಯ್ಕೆ. ಶಬ್ದ ರದ್ದತಿ (ANC) ಇರುವ ಸಾಧನಗಳನ್ನು ಬಳಸಿದರೆ ವಾಲ್ಯೂಮ್ ಹೆಚ್ಚಿಸುವ ಅಗತ್ಯ ಕಡಿಮೆಯಾಗುತ್ತದೆ.

ಒಟ್ಟಿನಲ್ಲಿ, ಇಯರ್‌ಬಡ್ಸ್‌ಗಳ ಅತಿಯಾದ ಬಳಕೆಯಿಂದ ತಾತ್ಕಾಲಿಕವಾಗಿ ಮಾತ್ರವಲ್ಲ, ದೀರ್ಘಾವಧಿಯಲ್ಲಿ ಗಂಭೀರ ಶ್ರವಣ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ. ಆದ್ದರಿಂದ ಯುವಕರು ಜಾಗ್ರತೆ ವಹಿಸಿ, ಸುರಕ್ಷಿತ ಬಳಕೆಯ ನಿಯಮಗಳನ್ನು ಪಾಲಿಸುವುದು ಅತ್ಯಂತ ಮುಖ್ಯ.