ಹೊಸದಿಗಂತ ಡಿಜಿಟಲ್ ಡೆಸ್ಕ್:
ರಷ್ಯಾದಿಂದ ತೈಲ ಖರೀದಿಸುವ ದೇಶಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಅಮೆರಿಕ ಮುಂದಾಗಿದೆ. ಭಾರತ, ಚೀನಾ ಮತ್ತು ಬ್ರೆಜಿಲ್ ಸೇರಿದಂತೆ ರಷ್ಯಾದ ತೈಲವನ್ನು ಖರೀದಿಸುವ ರಾಷ್ಟಗಳಿಗೆ ದ್ವಿಪಕ್ಷೀಯ ರಷ್ಯಾ ನಿರ್ಬಂಧ ಮಸೂದೆಗೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಸಿರು ನಿಶಾನೆ ತೋರಿದ್ದಾರೆ ಎಂದು ಅಮೆರಿಕದ ಸೆನೆಟರ್ ಲಿಂಡ್ಸೆ ಗ್ರಹಾಂ ಮಾಹಿತಿ ನೀಡಿದ್ದಾರೆ.
ಸಾಮಾಜಿಕ ಜಾಲತಾಣ Xನಲ್ಲಿ ಹೇಳಿಕೆ ನೀಡಿರುವ ಗ್ರಹಾಂ, ಉಕ್ರೇನ್‌ನಲ್ಲಿ ಯುದ್ಧ ಅಂತ್ಯಗೊಳಿಸಿ ಶಾಂತಿ ಸ್ಥಾಪನೆಗೆ ನಡೆಯುತ್ತಿರುವ ಪ್ರಯತ್ನಗಳ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದಿದ್ದಾರೆ. ಮುಂದಿನ ವಾರ ಈ ಮಸೂದೆಯನ್ನು ಅಮೆರಿಕ ಸಂಸತ್ತಿನಲ್ಲಿ ದ್ವಿಪಕ್ಷೀಯ ಮತದಾನಕ್ಕೆ ಒಳಪಡಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: Rice series 15 | ಬಿರಿಯಾನಿ ರೈಸ್: ಬೆಳಗಿನ ಉಪಹಾರಕ್ಕೆ ಹೇಳಿಮಾಡಿಸಿದ ತಿಂಡಿ!
ಈ ಮಸೂದೆಯು ರಷ್ಯಾದ ಯುದ್ಧ ಯಂತ್ರಕ್ಕೆ ಹಣಕಾಸು ಒದಗಿಸುವ ಅಗ್ಗದ ತೈಲ ಖರೀದಿಯನ್ನು ತಡೆಯುವ ಉದ್ದೇಶ ಹೊಂದಿದೆ. ಚೀನಾ, ಭಾರತ ಮತ್ತು ಬ್ರೆಜಿಲ್ ಸೇರಿದಂತೆ ಪ್ರಮುಖ ತೈಲ ಖರೀದಿದಾರ ರಾಷ್ಟ್ರಗಳ ಮೇಲೆ ಅಧ್ಯಕ್ಷ ಟ್ರಂಪ್‌ಗೆ ಬಲವಾದ ಒತ್ತಡ ತರುವ ಅಧಿಕಾರವನ್ನು ಇದು ನೀಡಲಿದೆ ಎಂದು ಗ್ರಹಾಂ ಹೇಳಿದ್ದಾರೆ.
ಯುಎಸ್ ಕಾಂಗ್ರೆಸ್ ಮಾಹಿತಿ ಪ್ರಕಾರ, ‘ರಷ್ಯಾ ನಿರ್ಬಂಧ ಕಾಯ್ದೆ–2025’ ಅಡಿಯಲ್ಲಿ ವ್ಯಕ್ತಿಗಳು ಮತ್ತು ಸಂಸ್ಥೆಗಳ ಮೇಲೆ ದಂಡ ವಿಧಿಸುವುದರ ಜೊತೆಗೆ, ರಷ್ಯಾದಿಂದ ಆಮದು ಮಾಡಿಕೊಳ್ಳುವ ಸರಕು ಹಾಗೂ ಸೇವೆಗಳ ಮೇಲೆ ಕನಿಷ್ಠ ಶೇಕಡಾ 500ರಷ್ಟು ಸುಂಕ ಹೆಚ್ಚಿಸುವ ಪ್ರಸ್ತಾವವೂ ಒಳಗೊಂಡಿದೆ.

