ದೇಹದಲ್ಲಿ ಮೂತ್ರ ವಿಸರ್ಜನೆ ಸಹಜ ಪ್ರಕ್ರಿಯೆ. ಕಿಡ್ನಿಗಳಿಂದ ಉತ್ಪತ್ತಿಯಾಗುವ ಮೂತ್ರವು ಮೂತ್ರಕೋಶವನ್ನು ತಲುಪಿದಾಗ ಅದು ತುಂಬಿ, ವಿಸರ್ಜನೆಗಾಗುವ ಒತ್ತಡ ಮೂಡುತ್ತದೆ. ಆದರೆ ಕೆಲವರಿಗೆ ಮೂತ್ರ ವಿಸರ್ಜನೆಯಾಗುವ ಸಮಯದಲ್ಲಾಗಲಿ ಅಥವಾ ನಂತರ ತಲೆ ಸುತ್ತುವಿಕೆ ಅನುಭವವಾಗುತ್ತದೆ. ಈ ಸ್ಥಿತಿಯನ್ನು ವೈದ್ಯಕೀಯವಾಗಿ ಮೈಕ್ಚುರಿಷನ್ ಸಿಂಕೋಪ್ (Micturition Syncope) ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ನಿಂತು ಮೂತ್ರ ವಿಸರ್ಜಿಸುವ ಪುರುಷರಲ್ಲಿ ಇದು ಹೆಚ್ಚು ಕಂಡುಬರುತ್ತದೆ. ಮಹಿಳೆಯರಲ್ಲಿಯೂ ಅಪರೂಪಕ್ಕೆ ಈ ಸಮಸ್ಯೆ ಕಾಣಬಹುದು. ಇದರ ಪ್ರಮುಖ ಕಾರಣಗಳು, ಲಕ್ಷಣಗಳು ಹಾಗೂ ಚಿಕಿತ್ಸೆ ಬಗ್ಗೆ ತಿಳಿದುಕೊಳ್ಳೋಣ.

ಪ್ರಮುಖ ಕಾರಣಗಳು
ವಾಗಲ್ ನರ ಚಟುವಟಿಕೆ – ಮೂತ್ರ ವಿಸರ್ಜನೆ ಸಮಯದಲ್ಲಿ ವಾಗಲ್ ನರವು ಪ್ರಚೋದನೆಯಾಗುತ್ತದೆ. ಇದರಿಂದ ರಕ್ತನಾಳಗಳು ಹಿಗ್ಗುತ್ತವೆ, ಹೃದಯ ಬಡಿತ ನಿಧಾನಗೊಳ್ಳುತ್ತದೆ ಮತ್ತು ರಕ್ತದೊತ್ತಡ ಹಠಾತ್ ಕುಸಿತಗೊಳ್ಳುತ್ತದೆ. ಮೆದುಳಿಗೆ ತಾತ್ಕಾಲಿಕವಾಗಿ ರಕ್ತದ ಹರಿವು ಕಡಿಮೆಯಾಗುವುದರಿಂದ ತಲೆ ಸುತ್ತುತ್ತದೆ.
ಪ್ಯಾರಾಸಿಂಪಥೆಟಿಕ್ ನರಮಂಡಲ ಪ್ರತಿಕ್ರಿಯೆ – ಮೂತ್ರ ವಿಸರ್ಜನೆಯನ್ನು ನಿಯಂತ್ರಿಸುವ ಈ ನರಮಂಡಲ ಅತಿಯಾಗಿ ಪ್ರತಿಕ್ರಿಯಿಸಿದರೆ, ರಕ್ತದೊತ್ತಡ ಕುಸಿದು ತಲೆತಿರುಗುವಿಕೆ ಉಂಟಾಗುತ್ತದೆ.

ನಿರ್ಜಲೀಕರಣ – ದೇಹಕ್ಕೆ ನೀರಿನ ಕೊರತೆ ಉಂಟಾದಾಗ ರಕ್ತದ ಪ್ರಮಾಣ ಕಡಿಮೆಯಾಗುತ್ತದೆ. ಇದರ ಪರಿಣಾಮ ಮೂತ್ರ ವಿಸರ್ಜನೆ ವೇಳೆ ತಲೆ ಸುತ್ತುವುದು.
ರಾತ್ರಿ ವೇಳೆ ಮೂತ್ರ ವಿಸರ್ಜನೆ – ನಿದ್ರೆಯ ಸಮಯದಲ್ಲಿ ರಕ್ತದೊತ್ತಡ ಸಹಜವಾಗಿಯೇ ಕಡಿಮೆಯಿರುತ್ತದೆ. ಇದ್ದಕ್ಕಿದ್ದಂತೆ ಎದ್ದು ನಿಲ್ಲುವುದರಿಂದ ರಕ್ತದೊತ್ತಡ ಇನ್ನಷ್ಟು ಕುಸಿದು ತಲೆ ಸುತ್ತುತ್ತದೆ.
ಮತ್ತಷ್ಟು ಕಾರಣಗಳು – ಮದ್ಯಪಾನ, ಅತಿಯಾದ ಆಯಾಸ, ಹೊಟ್ಟೆಯ ಒತ್ತಡದ ಹಠಾತ್ ಬದಲಾವಣೆ ಮುಂತಾದವು ಸಹ ತಲೆತಿರುಗುವಿಕೆಗೆ ಕಾರಣವಾಗುತ್ತವೆ.

ಲಕ್ಷಣಗಳು
ಮೂತ್ರ ವಿಸರ್ಜನೆ ಸಮಯದಲ್ಲಿ ತಲೆ ಸುತ್ತುವುದು
ಕಣ್ಣುಗಳಲ್ಲಿ ಒತ್ತಡ ಅಥವಾ ದೃಷ್ಟಿ ಮಂದವಾಗುವುದು
ಬೆವರುವಿಕೆ
ಆಯಾಸ, ದುರ್ಬಲತೆ
ಕೆಲವರಿಗೆ ಪ್ರಜ್ಞೆ ತಪ್ಪುವ ಸಾಧ್ಯತೆ

ಈ ಸ್ಥಿತಿ ಸಾಮಾನ್ಯವಾಗಿ ಗಂಭೀರವಲ್ಲ. ಆದರೂ ನಿರ್ಲಕ್ಷ್ಯ ಮಾಡಬಾರದು. ತಜ್ಞರು ಸಲಹೆ ನೀಡುವ ಚಿಕಿತ್ಸೆಗಳು:
ಪುರುಷರು ನಿಂತು ವಿಸರ್ಜನೆ ಮಾಡುವ ಬದಲು ಕುಳಿತುಕೊಳ್ಳುವುದು ಉತ್ತಮ.
ರಾತ್ರಿಯಲ್ಲಿ ಎದ್ದಾಗ ನಿಧಾನವಾಗಿ ಎದ್ದು ನಿಲ್ಲುವುದು.
ಸಾಕಷ್ಟು ನೀರು ಸೇವಿಸುವುದು.
ಮದ್ಯಪಾನ ತ್ಯಜಿಸುವುದು.
ಸಮಸ್ಯೆ ಪದೇಪದೇ ಉಂಟಾದರೆ ವೈದ್ಯರನ್ನು ಸಂಪರ್ಕಿಸುವುದು.