Tuesday, September 30, 2025

Do You Know | ಪಾನಿಪುರಿ ಮೂಲತಃ ಹುಟ್ಟಿದ್ದೆಲ್ಲಿ ಗೊತ್ತಾ? ಇದಕ್ಕಿದೆ ಶತಮಾನಗಳ ಇತಿಹಾಸ!

ಭಾರತದಲ್ಲಿ ಬೀದಿ ಬದಿ ಆಹಾರ ಎಂದಾಗಲೆಲ್ಲಾ ಮೊದಲಿಗೆ ನೆನಪಾಗೋದು ಪಾನಿಪುರಿ. ಸಿಹಿ, ಖಾರ ಮತ್ತು ಹುಳಿಯ ಮಿಶ್ರಣದಿಂದ ಎಲ್ಲ ವಯಸ್ಸಿನವರಿಗೂ ಇದು ಪ್ರಿಯವಾದ ತಿಂಡಿ. ಎಷ್ಟೇ ಬಾರಿ ತಿಂದರೂ ಇನ್ನೂ ತಿನ್ನಬೇಕು ಎನ್ನುವ ಆಸೆ ಹುಟ್ಟಿಸುವ ಪಾನಿಪುರಿ ಇಂದು ಪ್ರತಿಯೊಂದು ರಾಜ್ಯದಲ್ಲೂ ತನ್ನದೇ ಆದ ಶೈಲಿಯಲ್ಲಿ ತಯಾರಾಗುತ್ತಿದ್ದು, ಅದೇ ಕಾರಣಕ್ಕೆ ಇದು ದೇಶದಾದ್ಯಂತ ಅಚ್ಚುಮೆಚ್ಚಾಗಿದೆ.

ಇದರ ಇತಿಹಾಸವನ್ನು ಅವಲೋಕಿಸಿದರೆ, ಪಾನಿಪುರಿ ಭಾರತೀಯ ಮೂಲದ ತಿಂಡಿ ಅನ್ನೋದು ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿದೆ. ಆದ್ರೆ ಹೇಗೆ? ಯಾವಾಗ ಶುರುವಾಯಿತು ಅನ್ನೋದನ್ನು ಕೂಡ ತಿಳ್ಕೊಬೇಕಲ್ವಾ. ಕ್ರಿ.ಪೂ. 600ರಲ್ಲಿ ಅಂದಿನ ಮಗಧ ಪ್ರದೇಶದಲ್ಲಿ (ಇಂದಿನ ಬಿಹಾರ) ಮೊದಲು ತಯಾರಿಸಲ್ಪಟ್ಟಿತ್ತು ಎಂದು ಹೇಳಲಾಗುತ್ತದೆ. ಅಂದಿನಿಂದಲೇ ಈ ಖಾದ್ಯ ಭಾರತೀಯರ ಆಹಾರ ಸಂಸ್ಕೃತಿಯಲ್ಲಿ ನೆಚ್ಚಿನ ಸ್ಥಾನ ಪಡೆದುಕೊಂಡಿದೆ. ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಇದನ್ನು “ಪಾನಿಪುರಿ” ಎಂದರೆ, ಉತ್ತರ ಭಾರತದಲ್ಲಿ “ಗೋಲಗಪ್ಪಾ” ಎಂಬ ಹೆಸರಿನಿಂದ ಜನಪ್ರಿಯವಾಗಿದೆ. ಪಾನಿಯ ಸ್ವಾದ ಬೇರೆಬೇರೆ ಆಗಿದ್ದರೂ ಪುರಿಯ ರೂಪವು ಎಲ್ಲೆಡೆ ಒಂದೇ ರೀತಿಯಲ್ಲಿ ಉಳಿದಿದೆ.

ಆರಂಭದಲ್ಲಿ ಪಾನಿಪುರಿಯನ್ನು ಮನೆಗಳಲ್ಲಿ ವಿಶೇಷ ಸಂದರ್ಭಗಳಲ್ಲಿ ತಯಾರಿಸಲಾಗುತ್ತಿತ್ತು. ಆದರೆ 19 ಮತ್ತು 20ನೇ ಶತಮಾನದಲ್ಲಿ ಇದು ಬೀದಿ ತಿಂಡಿಯಾಗಿ ಜನಪ್ರಿಯತೆಯ ತುದಿಗೆ ತಲುಪಿತು. ಬೀದಿ ಬದಿ ವ್ಯಾಪಾರಿಗಳು ಗೂಡಂಗಡಿಗಳನ್ನು ತೆರೆಯುತ್ತಾ ಪಾನಿಪುರಿ ಮಾರಾಟವನ್ನು ಆರಂಭಿಸಿದ ನಂತರ, ಇದು ಸಾಮಾನ್ಯ ಜನರಿಗೆ ಅತಿ ಸುಲಭವಾಗಿ ದೊರೆಯುವ ತಿಂಡಿಯಾಯಿತು.

ಕ್ರಿಸ್ಪಿಯಾಗಿರುವ ಪುರಿಯನ್ನು ಖಾರದ ಮತ್ತು ರುಚಿಕರ ಪಾನಿಯಲ್ಲಿ ಮುಳುಗಿಸಿ ತಿನ್ನುವ ವಿಧಾನವೇ ಪಾನಿಪುರಿಗೆ ವಿಶಿಷ್ಟ ಆಕರ್ಷಣೆ. ಈ ಸ್ಪೈಸಿ ತಿಂಡಿ ತಿಂದವರಲ್ಲಿ ತೃಪ್ತಿ ನೀಡುವುದಕ್ಕಿಂತ ಹೆಚ್ಚಾಗಿ ಮತ್ತಷ್ಟು ತಿನ್ನಬೇಕೆಂಬ ಆಸೆಯನ್ನು ಹುಟ್ಟಿಸುತ್ತದೆ.

ಪಾನಿಪುರಿ ಕೇವಲ ಒಂದು ತಿಂಡಿಯಲ್ಲ, ಅದು ಭಾರತದ ಆಹಾರ ಸಂಸ್ಕೃತಿಯ ಪ್ರತಿಬಿಂಬ. ರಾಜಮನೆತನದ ಅಡುಗೆಮನೆಯಿಂದ ಹಿಡಿದು ಇಂದಿನ ಬೀದಿ ಬದಿ ಅಂಗಡಿಗಳವರೆಗೆ ಪಾನಿಪುರಿ ತನ್ನ ಸ್ಥಾನವನ್ನು ಕಾಯ್ದುಕೊಂಡಿದೆ. ಶತಮಾನಗಳಿಂದ ಜನರ ಹೃದಯದಲ್ಲಿ ಸ್ಥಾನ ಪಡೆದಿರುವ ಈ ಖಾದ್ಯ, ಮುಂದಿನ ತಲೆಮಾರುಗಳಲ್ಲಿಯೂ ಅದೇ ರೀತಿ ಮೆಚ್ಚುಗೆ ಪಡೆಯುವುದು ಖಚಿತ.