ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಠಿಣ ಸ್ಪರ್ಧೆ, ಭಾವನಾತ್ಮಕ ಕ್ಷಣಗಳು ಮತ್ತು 113 ದಿನಗಳ ಸುದೀರ್ಘ ಪ್ರಯಾಣದ ಬಳಿಕ ಬಿಗ್ ಬಾಸ್ ಕನ್ನಡ ಸೀಸನ್ 12ಕ್ಕೆ ತೆರೆ ಬಿದ್ದಿದೆ. ಕೋಟ್ಯಂತರ ಮತಗಳ ಬೆಂಬಲದೊಂದಿಗೆ ಗಿಲ್ಲಿ ವಿನ್ನರ್ ಆಗಿ ಹೊರಹೊಮ್ಮಿದ್ದು, ರಕ್ಷಿತಾ ಶೆಟ್ಟಿ ರನ್ನರ್ ಅಪ್ ಸ್ಥಾನ ಪಡೆದಿದ್ದಾರೆ.
ಫಿನಾಲೆ ವೇದಿಕೆಯಲ್ಲಿ ಗಿಲ್ಲಿ ಗೆಲುವಿನ ಸಂಭ್ರಮದಲ್ಲಿದ್ದರೆ, ರಕ್ಷಿತಾ ಅವರ ಪ್ರಯಾಣವೂ ಪ್ರೇಕ್ಷಕರ ಮನಗೆದ್ದಿದೆ. ಯಾವುದೇ ವಿಶೇಷ ಹಿನ್ನೆಲೆ ಇಲ್ಲದೆ, ಆಟದ ಮೂಲಕ ಕೊನೆಯ ಹಂತ ತಲುಪಿದ ರಕ್ಷಿತಾರ ಹೋರಾಟ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
ವಿನ್ನರ್‌ಗೆ 50 ಲಕ್ಷ ರೂಪಾಯಿ ನಗದು ಹಾಗೂ ಕಾರು ನೀಡುವ ಸಂಪ್ರದಾಯ ಮುಂದುವರಿದಿದ್ದು, ಈ ಬಾರಿ ರನ್ನರ್ ಅಪ್‌ಗೂ ಭರ್ಜರಿ ಬಹುಮಾನ ದೊರೆತಿದೆ. ಸಾಯಿ ಗೋಲ್ಡ್ ಪ್ಯಾಲೆಸ್ ವತಿಯಿಂದ ರಕ್ಷಿತಾಗೆ 20 ಲಕ್ಷ ರೂಪಾಯಿ ನಗದು ಚೆಕ್ ನೀಡಲಾಗಿದ್ದು, ಜಾರ್ ಅಪ್ಲಿಕೇಶನ್ ಮೂಲಕ ಇನ್ನೂ 5 ಲಕ್ಷ ರೂಪಾಯಿ ನಗದು ಉಡುಗೊರೆಯಾಗಿ ಲಭಿಸಿದೆ.
ಒಟ್ಟು 25 ಲಕ್ಷ ರೂಪಾಯಿ ಬಹುಮಾನ ಪಡೆದ ರಕ್ಷಿತಾಗೆ ಇದು ದೊಡ್ಡ ಪ್ರೋತ್ಸಾಹವಾಗಿದ್ದು, ಮಧ್ಯಮ ವರ್ಗದ ಕುಟುಂಬದಿಂದ ಬಂದ ಅವರ ಜೀವನದಲ್ಲಿ ಹೊಸ ಆರಂಭಕ್ಕೆ ಈ ಮೊತ್ತ ಸಹಕಾರಿಯಾಗಲಿದೆ ಅನ್ನೋದಂತೂ ಸತ್ಯ.


