ಹೊಸದಿಗಂತ ಡಿಜಿಟಲ್ ಡೆಸ್ಕ್:
ಟಾಲಿವುಡ್ ನಟ ಅಲ್ಲು ಅರ್ಜುನ್ ಸಿನಿಮಾ ಪರದೆಯ ಹೊರಗೂ ತಮ್ಮ ಕನಸಿನ ಯೋಜನೆಯನ್ನು ಸಾಕಾರಗೊಳಿಸಲು ಮುಂದಾಗಿದ್ದಾರೆ. ಹೈದರಾಬಾದ್‌ನ ಕೊಕಾಪೇಟ್ ಪ್ರದೇಶದಲ್ಲಿರುವ ಅಲ್ಲು ಸ್ಟುಡಿಯೋಸ್ ಆವರಣದಲ್ಲಿ ನಿರ್ಮಾಣವಾಗಿರುವ ಭವ್ಯ ಮಲ್ಟಿಪ್ಲೆಕ್ಸ್ ‘ಅಲ್ಲು ಸಿನಿಮಾಸ್’ ಶೀಘ್ರದಲ್ಲೇ ಸಾರ್ವಜನಿಕರಿಗೆ ಬಾಗಿಲು ತೆರೆಯಲಿದೆ. ಇದು ಅಲ್ಲು ಕುಟುಂಬದ ಸ್ವಂತ ಆಸ್ತಿಯಲ್ಲೇ ರೂಪುಗೊಂಡ ಮಹತ್ವಾಕಾಂಕ್ಷಿ ಯೋಜನೆಯಾಗಿದೆ.
ಉದ್ಘಾಟನೆಗೂ ಮುನ್ನ ಮಲ್ಟಿಪ್ಲೆಕ್ಸ್‌ನಲ್ಲಿ ನಡೆದ ತಾಂತ್ರಿಕ ಪರೀಕ್ಷೆಯ ವೇಳೆ ಅಲ್ಲು ಅರ್ಜುನ್ ತಮ್ಮ ಪತ್ನಿಯೊಂದಿಗೆ ಭೇಟಿ ನೀಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ದೃಶ್ಯಗಳಲ್ಲಿ ಕಾಣಿಸಿಕೊಂಡ ಐಷಾರಾಮಿ ಒಳಾಂಗಣ ವಿನ್ಯಾಸ ಮತ್ತು ಪ್ರೀಮಿಯಂ ಥಿಯೇಟರ್ ವ್ಯವಸ್ಥೆ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿದೆ. ತಾಂತ್ರಿಕ ಪರಿಶೀಲನೆ ಸಂದರ್ಭದಲ್ಲಿ ಖ್ಯಾತ ನಿರ್ದೇಶಕ ಎಸ್.ಎಸ್. ರಾಜಮೌಳಿ ಸೇರಿದಂತೆ ಚಿತ್ರರಂಗದ ಹಲವು ಗಣ್ಯರು ಉಪಸ್ಥಿತರಿದ್ದರು ಎನ್ನಲಾಗಿದೆ.
ಇದನ್ನೂ ಓದಿ: FOOD | ಬಾಯಲ್ಲಿ ನೀರೂರಿಸುವ ಚಿಕನ್ ರೋಸ್ಟ್! ಸೂಪರ್ ಟೇಸ್ಟ್
‘ಅಲ್ಲು ಸಿನಿಮಾಸ್’ ಭಾರತದ ಅತಿದೊಡ್ಡ ಡಾಲ್ಬಿ ಸಿನಿಮಾ ಪರದೆಯನ್ನು ಹೊಂದಿದ್ದು, ಸುಮಾರು 75 ಅಡಿ ಎತ್ತರದ ಪರದೆ, ಡಾಲ್ಬಿ ವಿಷನ್ 3D ಪ್ರೊಜೆಕ್ಷನ್ ಮತ್ತು ಡಾಲ್ಬಿ ಅಟ್ಮಾಸ್ ಧ್ವನಿ ವ್ಯವಸ್ಥೆ ಇದರ ಪ್ರಮುಖ ಆಕರ್ಷಣೆ. ಜೊತೆಗೆ ಐಷಾರಾಮಿ ಆಸನ ವ್ಯವಸ್ಥೆ ಮತ್ತು ಗೌರ್ಮೆಟ್ ಆಹಾರ ಆಯ್ಕೆಗಳು ಇಲ್ಲಿ ಲಭ್ಯವಾಗಲಿವೆ.
ಎಲ್ಲಾ ತಾಂತ್ರಿಕ ಸಿದ್ಧತೆಗಳು ಯಶಸ್ವಿಯಾಗಿ ಪೂರ್ಣಗೊಂಡ ಬಳಿಕ, 2026ರ ಸಂಕ್ರಾಂತಿ ಹಬ್ಬದ ವೇಳೆಗೆ, ಅಂದರೆ ಜನವರಿ 13ರಿಂದ 15ರ ನಡುವೆ ಮಲ್ಟಿಪ್ಲೆಕ್ಸ್ ಉದ್ಘಾಟನೆಯಾಗುವ ನಿರೀಕ್ಷೆಯಿದೆ. ಟಿಕೆಟ್ ಬುಕ್ಕಿಂಗ್ ಆರಂಭವಾದ ಬಳಿಕ BookMyShow ಮೂಲಕ ಲಭ್ಯವಾಗುವ ಸಾಧ್ಯತೆ ಇದೆ.

