Wednesday, October 1, 2025

ನೇಲ್‌ ಪಾಲಿಶ್‌ ಹಚ್ಚೋದು ನಿಮಗೆ ಇಷ್ಟನಾ? ಆದ್ರೆ ಆದ್ರಿಂದ್ಲೇ ಆಗ್ತಿದೆ ಕಷ್ಟ, ಗೊತ್ತಾ ನಿಮಗೆ?

ಪ್ರತಿಯೊಬ್ಬರೂ ತಮ್ಮನ್ನು ಆಕರ್ಷಕವಾಗಿ ತೋರಿಸಿಕೊಳ್ಳಲು ಬಯಸುತ್ತಾರೆ. ವಿಶೇಷವಾಗಿ ಯುವತಿಯರಿಗೆ ಸೌಂದರ್ಯ ಸಾಧನಗಳು ಹಾಗೂ ಉಡುಪುಗಳಲ್ಲಿ ಹೆಚ್ಚು ಆಸಕ್ತಿ ಇರೋದು ಸಹಜ. ಈ ಪೈಕಿ ನೇಲ್‌ ಪಾಲಿಶ್‌ ಕೂಡ ಒಂದು ಪ್ರಮುಖ ಅಂಶ. ಬಿಳಿ ಉಗುರಿಗೆ ಬಣ್ಣ ಹಚ್ಚಿಕೊಂಡರೆ ಕೈಗೆ ಹೊಸ ಮೆರುಗು ಬರುತ್ತದೆ ಎಂಬ ಭಾವನೆ ಹಲವರದ್ದು. ಆದರೆ ಪದೇಪದೇ ನೇಲ್‌ ಪಾಲಿಶ್‌ ಬಳಸುವುದರಿಂದ ಆರೋಗ್ಯಕ್ಕೆ ಹಾನಿಯಾಗುವ ಸಾಧ್ಯತೆಗಳಿವೆ. ಸೌಂದರ್ಯಕ್ಕಾಗಿ ಬಳಸುವ ಈ ಬಣ್ಣ ಉಗುರಿನೊಂದಿಗೆ ದೇಹಕ್ಕೂ ತೊಂದರೆ ತರಬಲ್ಲದು.

ಉಗುರಿನ ಆರೋಗ್ಯ ಹಾಳಾಗುವುದು

ನೇಲ್‌ ಪಾಲಿಶ್‌ ಹಾಗೂ ರಿಮೂವರ್‌ಗಳಲ್ಲಿ ಇರುವ ರಾಸಾಯನಿಕಗಳು ಉಗುರನ್ನು ತೆಳುವಾಗಿಸಿ, ಸುಲಭವಾಗಿ ಮುರಿಯುವಂತೆ ಮಾಡುತ್ತವೆ. ಇದರಿಂದ ಉಗುರುಗಳು ದುರ್ಬಲಗೊಳ್ಳುತ್ತವೆ.

ಅಲರ್ಜಿಗಳು ಮತ್ತು ದದ್ದುಗಳು

ನೇಲ್‌ ಪಾಲಿಶ್‌ ಹೆಚ್ಚು ಬಳಸುವುದರಿಂದ ಉಗುರುಗಳ ಸುತ್ತ ಚರ್ಮದಲ್ಲಿ ತುರಿಕೆ, ಕೆಂಪು ದದ್ದು ಹಾಗೂ ಉರಿ ಕಾಣಿಸಿಕೊಳ್ಳಬಹುದು. ಸಂವೇದನಾಶೀಲ ಚರ್ಮ ಹೊಂದಿರುವವರಿಗೆ ಇದು ಹೆಚ್ಚಾಗಿ ತೊಂದರೆ ಕೊಡುತ್ತದೆ.

ಉಸಿರಾಟ ಸಮಸ್ಯೆಗಳು

ನೇಲ್‌ ಪಾಲಿಶ್‌ನ ಕಟುವಾದ ವಾಸನೆ ದೀರ್ಘಾವಧಿಗೆ ಶ್ವಾಸಕೋಶಕ್ಕೆ ಹಾನಿ ಮಾಡಬಹುದು. ಇದರಿಂದ ತಲೆನೋವು, ಉಸಿರಾಟದ ತೊಂದರೆಗಳಾಗಬಹುದು.

ಸೋಂಕಿನ ಅಪಾಯ

ನೇಲ್‌ ಪಾಲಿಶ್‌ ಹಚ್ಚಿದ ಉಗುರುಗಳ ಸುತ್ತ ಬ್ಯಾಕ್ಟೀರಿಯಾಗಳು ಬೆಳೆಯುವ ಸಾಧ್ಯತೆ ಇರುತ್ತದೆ. ಇದರಿಂದ ಶಿಲೀಂಧ್ರ ಸೋಂಕು ತಗಲಬಹುದು. ಕೃತಕ ಉಗುರು ಹಾಕುವವರು ವಿಶೇಷವಾಗಿ ಹೆಚ್ಚು ಎಚ್ಚರಿಕೆ ವಹಿಸಬೇಕು.

ಗರ್ಭಿಣಿಯರಿಗೆ ಅಪಾಯಕಾರಿ

ನೇಲ್‌ ಪಾಲಿಶ್‌ನಲ್ಲಿ ಇರುವ ವಿಷಕಾರಿ ರಾಸಾಯನಿಕಗಳು ಭ್ರೂಣದ ಬೆಳವಣಿಗೆಯನ್ನು ಹಾನಿಗೊಳಿಸಬಹುದು. ಆದ್ದರಿಂದ ಗರ್ಭಿಣಿಯರು ಇದನ್ನು ತಪ್ಪಿಸುವುದು ಉತ್ತಮ.

ಮುನ್ನೆಚ್ಚರಿಕೆಗಾಗಿ ಟಿಪ್ಸ್

ವಿಶೇಷ ಸಂದರ್ಭಗಳಲ್ಲಿ ಮಾತ್ರ ನೇಲ್‌ ಪಾಲಿಶ್‌ ಬಳಸಿ, ದಿನನಿತ್ಯ ಬಳಕೆಯನ್ನು ತಪ್ಪಿಸಿ.

ನೈಸರ್ಗಿಕ ಮತ್ತು ವಿಷಕಾರಿಯಲ್ಲದ ಉತ್ಪನ್ನಗಳನ್ನು ಆಯ್ಕೆಮಾಡಿ.

ಹಚ್ಚಿದ ಮೇಲೆ ಹೆಚ್ಚು ದಿನ ಉಳಿಸದೆ ತೆಗೆದುಬಿಡಿ.

ಸಾಧ್ಯವಾದಷ್ಟು ಊಟ ಮಾಡುವ ಕೈಯ ಉಗುರುಗಳಿಗೆ ಹಚ್ಚುವುದನ್ನು ತಪ್ಪಿಸಿ.