ಇಂದಿನ ಡಿಜಿಟಲ್ ಜೀವನಶೈಲಿಯಲ್ಲಿ ಇಯರ್‌ಫೋನ್ ನಮ್ಮ ದಿನಚರಿಯ ಅವಿಭಾಜ್ಯ ಭಾಗವಾಗಿದೆ. ಕೆಲಸ, ಓದು, ಪ್ರಯಾಣ, ಮನರಂಜನೆ ಎಲ್ಲದರಲ್ಲೂ ಕಿವಿಯಲ್ಲಿ ಇಯರ್‌ಫೋನ್ ಅಂಟಿಕೊಂಡೇ ಇರುತ್ತದೆ. ಆದರೆ ಇದು ಕೇವಲ ಸೌಲಭ್ಯವೇ, ಅಥವಾ ನಿಧಾನವಾಗಿ ಆರೋಗ್ಯಕ್ಕೆ ಹಾನಿಯನ್ನು ತಂದಿಡುತ್ತದೆಯೇ? ಈ ಪ್ರಶ್ನೆಗೆ ಉತ್ತರ ಹುಡುಕೋದು ಪ್ರತಿಯೊಬ್ಬರಿಗೂ ಅಗತ್ಯ.
ದೀರ್ಘಕಾಲ ಕಿವಿಯಲ್ಲಿ ಇಯರ್‌ಫೋನ್ ಬಳಸುವುದರಿಂದ ಶಬ್ದದ ಒತ್ತಡ ನೇರವಾಗಿ ಕಿವಿ ಪರದೆಗೆ ತಾಗುತ್ತದೆ. ಹೆಚ್ಚು ವಾಲ್ಯೂಮ್‌ನಲ್ಲಿ ಕೇಳುವ ಅಭ್ಯಾಸ ಕಿವಿಯ ಶ್ರವಣ ಶಕ್ತಿಯನ್ನು ನಿಧಾನವಾಗಿ ಕಡಿಮೆ ಮಾಡಬಹುದು. ಇದನ್ನು ನಾವು ತಕ್ಷಣ ಗಮನಿಸದೇ ಇರಬಹುದು, ಆದರೆ ಹಾನಿ ಮೌನವಾಗಿ ಆಗುತ್ತಿರುತ್ತದೆ.

ಇಯರ್‌ಫೋನ್‌ಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸದೇ ಬಳಸಿದರೆ ಬ್ಯಾಕ್ಟೀರಿಯಾ ಹೆಚ್ಚಾಗುತ್ತದೆ. ಇದರಿಂದ ಕಿವಿಯಲ್ಲಿ ಉರಿ, ಸೋಂಕು, ತುರಿಕೆ ಮತ್ತು ಕೆಲವೊಮ್ಮೆ ದ್ರವ ಹೊರಬರುವ ಸಮಸ್ಯೆಗಳೂ ಕಾಣಿಸಿಕೊಳ್ಳುತ್ತವೆ.
ನಿರಂತರವಾಗಿ ಕಿವಿಗೆ ಶಬ್ದ ತಾಕುತ್ತಿರೋದರಿಂದ ಮೆದುಳಿನ ಮೇಲೆ ಒತ್ತಡ ಹೆಚ್ಚಾಗುತ್ತದೆ. ಇದರಿಂದ ತಲೆನೋವು, ನಿದ್ರಾಹೀನತೆ ಮತ್ತು ಏಕಾಗ್ರತೆ ಕೊರತೆ ಉಂಟಾಗಬಹುದು.
ಸುರಕ್ಷಿತ ಬಳಕೆಗೆ ಸಣ್ಣ ಸಲಹೆಗಳು:
ವಾಲ್ಯೂಮ್ ಅನ್ನು ಮಧ್ಯಮ ಮಟ್ಟದಲ್ಲೇ ಇಡಿ, ಪ್ರತಿ ಗಂಟೆಗೆ ಕನಿಷ್ಠ 10–15 ನಿಮಿಷ ಕಿವಿಗೆ ವಿಶ್ರಾಂತಿ ನೀಡಿ. ಇಯರ್‌ಫೋನ್‌ಗಳನ್ನು ಹಂಚಿಕೊಳ್ಳುವುದನ್ನು ತಪ್ಪಿಸಿ ಮತ್ತು ವಾರಕ್ಕೊಮ್ಮೆ ಸ್ವಚ್ಛಗೊಳಿಸಿ.


