Saturday, September 6, 2025

Eyes Blinking | ನಿಮ್ಮ ಕಣ್ಣು ಪದೇ ಪದೇ ಅದರುತ್ತಾ? ಇದೇ ಕಾರಣ ಇರಬಹುದು ನೋಡಿ!

ನಮ್ಮ ದೇಹದ ಅತ್ಯಂತ ಸೂಕ್ಷ್ಮ ಹಾಗೂ ಮುಖ್ಯ ಅಂಗಗಳಲ್ಲಿ ಕಣ್ಣು ಪ್ರಮುಖವಾದುದು. ಬೆಳಕನ್ನು ಗುರುತಿಸಿ, ರೂಪ ಹಾಗೂ ಗಾತ್ರವನ್ನು ಅರ್ಥಮಾಡಿಕೊಳಲು ಕಣ್ಣುಗಳು ಪ್ರಮುಖ ಪಾತ್ರ ವಹಿಸುತ್ತವೆ. ಆದರೆ ಹಲವರಿಗೆ ಆಗಾಗ ಕಣ್ಣು ಅದುರುವ ಸಮಸ್ಯೆ ಉಂಟಾಗುತ್ತದೆ. ಇದನ್ನು ಕೆಲವರು ಶಕುನಗಳ ಜೊತೆ ಜೋಡಿಸುತ್ತಾರೆ. ಪುರುಷರಿಗೆ ಬಲಗಣ್ಣು ಅದರಿದರೆ ಒಳ್ಳೆಯದು, ಮಹಿಳೆಯರಿಗೆ ಎಡಗಣ್ಣು ಅದರಿದರೆ ಒಳ್ಳೆಯದು ಎಂಬ ನಂಬಿಕೆಗಳಿವೆ. ಆದರೆ ವಾಸ್ತವದಲ್ಲಿ ಇದಕ್ಕೆ ವೈಜ್ಞಾನಿಕ ಕಾರಣಗಳೇ ಹೆಚ್ಚು.

ಕಣ್ಣು ಅದುರುವುದಕ್ಕೆ ಒತ್ತಡ, ದಣಿವು, ನಿದ್ರಾಹೀನತೆ, ಡ್ರೈ ಐಸ್, ಕೆಫೀನ್ ಸೇವನೆ, ಅಲರ್ಜಿ ಅಥವಾ ಆಲ್ಕೋಹಾಲ್‌ ಸೇವನೆ ಕಾರಣವಾಗಬಹುದು. ಪೌಷ್ಟಿಕಾಂಶದ ಕೊರತೆಯೂ ಈ ಸಮಸ್ಯೆಗೆ ಕಾರಣ. ನಮ್ಮ ಕಣ್ಣಿನ ಬಳಿಯ ನರಗಳು ದುರ್ಬಲವಾದಾಗ, ಹೆಚ್ಚು ಸಮಯ ಕಂಪ್ಯೂಟರ್ ಮುಂದೆ ಕೆಲಸ ಮಾಡಿದಾಗ ಅಥವಾ ಸರಿಯಾದ ಬೆಳಕಿಲ್ಲದ ಸ್ಥಳದಲ್ಲಿ ಹೆಚ್ಚು ಕಾಲ ಓದಿದಾಗ ಕಣ್ಣು ಅದುರುವ ಲಕ್ಷಣಗಳು ಕಂಡುಬರುತ್ತವೆ.

ಇದನ್ನು ತಡೆಯಲು ನಿದ್ರೆಗೆ ಆದ್ಯತೆ ನೀಡುವುದು ಬಹಳ ಮುಖ್ಯ. ದಿನಕ್ಕೆ ಕನಿಷ್ಠ 7–8 ಗಂಟೆಗಳ ನಿದ್ರೆ ಅಗತ್ಯ. ಜೊತೆಗೆ ಕೆಫೀನ್ ಪದಾರ್ಥಗಳನ್ನು ಕಡಿಮೆ ಸೇವನೆ ಮಾಡಬೇಕು. ಕೆಲಸದ ವೇಳೆ ಮಧ್ಯಂತರ ವಿಶ್ರಾಂತಿ ಪಡೆದು ಕಣ್ಣಿಗೆ ಆರಾಮ ನೀಡಬೇಕು. ಆಳವಾದ ಉಸಿರಾಟ ಮತ್ತು ಸಾವಧಾನತೆಯಿಂದ ಒತ್ತಡ ಕಡಿಮೆ ಮಾಡಿದರೆ ಈ ಸಮಸ್ಯೆ ತಗ್ಗುತ್ತದೆ.

ಒಂದು ವಾರಕ್ಕಿಂತ ಹೆಚ್ಚು ಕಾಲ ಕಣ್ಣು ಅದುರುವ ಸಮಸ್ಯೆ ಮುಂದುವರಿದರೆ ಅಥವಾ ದಿನನಿತ್ಯದ ಜೀವನದ ಮೇಲೆ ಪರಿಣಾಮ ಬೀರಿದರೆ ವೈದ್ಯರ ಸಲಹೆ ಪಡೆಯುವುದು ಉತ್ತಮ. ಕಣ್ಣು ಅದುರುವುದನ್ನು ಶಕುನ–ಅಪಶಕುನಗಳ ಜೊತೆ ಸೇರಿಸಿ ನೋಡದೇ, ಆರೋಗ್ಯದ ಸಂಕೇತವೆಂದು ತಿಳಿದುಕೊಂಡು ಸರಿಯಾದ ಕ್ರಮ ಕೈಗೊಂಡರೆ ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳಬಹುದು.

ಇದನ್ನೂ ಓದಿ