Sunday, October 12, 2025

ಹೆರಿಗೆ ಮಾಡಿಸಲು 2000 ರೂ. ಲಂಚಕ್ಕೆ ಬೇಡಿಕೆ: ವೈದ್ಯೆಗೆ ಐದು ವರ್ಷ ಜೈಲು ಶಿಕ್ಷೆ

ಹೊಸದಿಗಂತ ತುಮಕೂರು:

ಹೆರಿಗೆ ಮಾಡಿಸಲು 2000 ಲಂಚ ಪಡೆದ ಆರೋಪ ಸಾಬೀತಾದ ಹಿನ್ನಲೆಯಲ್ಲಿ ಪ್ರಸೂತಿ ಮತ್ತು ಜಿಲ್ಲಾ ಆಸ್ಪತ್ರೆ ಸ್ತ್ರೀ ರೋಗ ತಜ್ಞರಾದ ಡಾ ಸಿ.ಎನ್.ಮಹಾಲಕ್ಷ್ಮಮ್ಮಗೆ 7ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಯಾಸ್ಮಿನ ಪರವೀನ ಲಾಡಖಾನ ಅವರು ಐದು ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು ಇಪ್ಪತ್ತು ಸಾವಿರ ದಂಡ, ದಂಡ ಕಟ್ಟಲು ವಿಫಲವಾದಲ್ಲಿ 6 ತಿಂಗಳ ಸಾದಾ ಕಾರಾಗೃಹ ಶಿಕ್ಷೆ ವಿಧಿಸಿದ್ದಾರೆ.

ಈ ಪ್ರಕರಣದಲ್ಲಿ ಲೋಕಾಯುಕ್ತ ಸಂಸ್ಥೆಯ ಪರವಾಗಿ ವಿಶೇಷ ಸಾರ್ವಜನಿಕ ಅಭಿಯೋಜಕ ಎನ್.ಬಸವರಾಜು ವಾದ ಮಂಡಿಸಿದ್ದರು.

ಪ್ರಕರಣದ ಹಿನ್ನೆಲೆ :
ನಗರದ ಕೋತಿತೋಪು ವಾಸಿಯಾದ ಮುಕುಂದ.ಜಿ.ಟಿ ಅವರ ನಾದಿನಿ ಸವಿತಾ ಅವರು 2021ರ ಫೆ.2 ರಂದು ಹೆರಿಗೆ ನೋವಿನಿಂದ ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದು ಇವರಿಗೆ ಹೆರಿಗೆ ಮಾಡಿಸಲು ಆರೋಪಿ ಡಾ ಸಿ.ಎನ್.ಮಹಾಲಕ್ಷ್ಮಮ್ಮ 3000 ರೂ ಲಂಚದ ಹಣಕ್ಕೆ ಒತ್ತಾಯ ಮಾಡಿದ್ದರು.
ಲಂಚ ನೀಡಲು ಇಷ್ಟವಿಲ್ಲದೇ ಇದ್ದರೂ, ನಾದಿನಿ ಮತ್ತು ಮಗುವಿನ ಆರೋಗ್ಯದ ದೃಷ್ಟಿಯಿಂದ ಅನಿವಾರ್ಯವಾಗಿ 2000 ರೂ ಲಂಚ ನೀಡಲು ಒಪ್ಪಿ ಆಸ್ಪತ್ರೆಯ ಡಿ ಗ್ರೂಪ್ ನೌಕರ ಬರಕತ್ ಅಲಿಗೆ 2000 ರೂ ನೀಡಿದ್ದರು. ಈ ಹಣವನ್ನು ಬರಕತ್ ಅಲಿ ಡಾ. ಸಿ.ಎನ್.ಮಹಾಲಕ್ಷ್ಮಮ್ಮಗೆ ನೀಡಿದ್ದರು.
ಈ ಸಂಬಂಧ 2021 ರ ಫೆ. 4 ರಂದು ಮುಕುಂದ.ಜಿ.ಜಿ ತುಮಕೂರು ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಡಿ.ಎಸ್.ಪಿ ಮಲ್ಲಿಕಾರ್ಜುನಚುಕ್ಕಿ ಪ್ರಕರಣ ದಾಖಲಿಸಿ, ತನಿಖೆ ನಡೆಸಿ, ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.

error: Content is protected !!