ಹೊಸದಿಗಂತ ಡಿಜಿಟಲ್ ಡೆಸ್ಕ್:
ಜೈಪುರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದೆಹಲಿಯಿಂದ ಬಂದಿದ್ದ ಮಹಿಳಾ ಪ್ರಯಾಣಿಕರ ಮೇಲೆ ನಾಯಿ ದಾಳಿ ನಡೆಸಿದ ಘಟನೆ ನಡೆದಿದೆ. ಟರ್ಮಿನಲ್–2ರಿಂದ ಹೊರಬರುತ್ತಿದ್ದ ವೇಳೆ ಗೇಟ್ ಸಮೀಪ ಇದ್ದ ನಾಯಿ ಹಠಾತ್ ದಾಳಿ ಮಾಡಿದ್ದು, ಮಹಿಳೆಯ ಕಾಲಿಗೆ ಗಂಭೀರ ಗಾಯಗಳಾಗಿವೆ.
ಮಧ್ಯಾಹ್ನ ಸುಮಾರು 2.20ರ ವೇಳೆಗೆ ನಡೆದ ಈ ಘಟನೆ ಕ್ಷಣಾರ್ಧದಲ್ಲಿ ಆತಂಕ ಸೃಷ್ಟಿಸಿತು. ದಾಳಿಯಿಂದ ಮಹಿಳೆ ನೋವಿನಿಂದ ಕಿರುಚುತ್ತಿದ್ದಂತೆ ಅಲ್ಲಿದ್ದ ಇತರೆ ಪ್ರಯಾಣಿಕರು ನೆರವಿಗೆ ಧಾವಿಸಿ, ಅವರನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ದರು. ಕಾಲಿನಲ್ಲಿ ರಕ್ತಸ್ರಾವವಾಗುತ್ತಿದ್ದ ಕಾರಣ ತಕ್ಷಣವೇ ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಮಾಹಿತಿ ನೀಡಲಾಯಿತು.
ಇದನ್ನೂ ಓದಿ:
ಅಧಿಕಾರಿಗಳ ಸಹಾಯದಿಂದ ಗಾಯಾಳುವನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತು. ವೈದ್ಯರು ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಅವರನ್ನು ಬಿಡುಗಡೆ ಮಾಡಿದ್ದಾರೆ. ದಾಳಿ ನಡೆಸಿದ ನಾಯಿಗೆ ಈಗಾಗಲೇ ಲಸಿಕೆ ನೀಡಲಾಗಿತ್ತು ಎಂದು ಮೂಲಗಳು ತಿಳಿಸಿವೆ. ಹೀಗಾಗಿ ಆರೋಗ್ಯ ಸಂಬಂಧಿತ ಅಪಾಯ ಕಡಿಮೆ ಎನ್ನಲಾಗಿದೆ.
ಘಟನೆಯ ಬಳಿಕ ವಿಮಾನ ನಿಲ್ದಾಣ ಆಡಳಿತವು ಭದ್ರತಾ ಕ್ರಮಗಳನ್ನು ಮತ್ತಷ್ಟು ಕಟ್ಟುನಿಟ್ಟಾಗಿಸಲು ಮುಂದಾಗಿದೆ.



