ಹೊಸದಿಗಂತ ವರದಿ,ಕಲಬುರಗಿ:
ದಾನ,ಧರ್ಮ ಮಾಡುವುದರಿಂದ ಮನಸ್ಸಿನ ಕೊಳೆ ಹಸನವಾಗಲಿದೆ.ಮನುಷ್ಯ ಉನ್ನತ ಮಟ್ಟಕ್ಕೆ ಏರಬೇಕಾದರೆ ರಾಮಮಂತ್ರ ಜಪಿಸಬೇಕು. ಮನಸ್ಸು ಸ್ಚಚ್ಛ ಮಾಡಿಕೊಳ್ಳಬೇಕಾದರೆ ದಾನ, ಧರ್ಮ ಮಾಡಬೇಕು ಎಂದು ಉತ್ತರಾದಿ ಮಠದ ಮಠಾಧೀಶರಾದ ಶ್ರೀ ಸತ್ಯಾತ್ಮತೀರ್ಥರು ತಿಳಿಸಿದರು.
ನಗರದ ನೂತನ ವಿದ್ಯಾಲಯ ಸಂಸ್ಥೆಯ ಸತ್ಯಪ್ರಮೋದ ತೀರ್ಥ ಸಭಾ ಮಂಟಪದಲ್ಲಿ ನಡೆಯುತ್ತಿರುವ ಹರಿದಾಸ ಸಾಹಿತ್ಯ ಪ್ರಚಾರ ವಾಹಿನಿಯ ರಜತ ಮಹೋತ್ಸವ ನಿಮಿತ್ತ ಪ್ರವಚನ ನೀಡಿದ ಶ್ರೀಗಳು ಸ್ನಾನದ ಮಹತ್ವ ತಿಳಿಸಿಕೊಟ್ಟರು.
ಕಳೆದ 25 ವರ್ಷದಿಂದ ನಿರಂತರವಾಗಿ ದಾಸರ ಸಂದೇಶಗಳನ್ನು ಜನರಿಗೆ ತಲುಪಿಸುವ ಕೆಲಸ ವಾಹಿನಿ ಮಾಡುತ್ತಿದೆ ಎಂದು ಶ್ಲಾಘಿಸಿದರು.
ದಾನ ಧರ್ಮ ಮಾಡಿದರೆ ಪಾಪ,ಕರ್ಮ ಕಳೆದುಕೊಳ್ಳಬಹುದು.ಯಾವ ವಸ್ತು ದಾನ ಮಾಡುತ್ತಾರೊ ಆ ವಸ್ತುವಿನ ಮೇಲಿನ ಅಭಿಮಾನ ಕಡಿಮೆ ಆಗುತ್ತದೆ.ಅಭಿಮಾನ ಕಡಿಮೆ ಮಾಡಿಕೊಳ್ಳುವುದೂ ಒಂದು ಸ್ನಾನ.ತತ್ವ ಜ್ಞಾನ ಸಂಪಾದಿಸುವುದೂ ಒಂದು ಪವಿತ್ರ ಸ್ನಾನ.ಜ್ಞಾನ ಪಡೆದುಕೊಂಡರೆ ಮನಸ್ಸಿನಲ್ಲಿ ಕತ್ತಲೆ ಹೋಗಕಾಡಿಸುತ್ತದೆ ಹೀಗಾಗಿ ಜ್ಞಾನ ಪಡೆಯುವುದೂ ಸ್ನಾನ ಎಂದು ಪುರಂದರದಾಸರು ವರ್ಣಿಸಿದ್ದಾರೆ ಎಂದರು.
ಪಾಪ, ಕರ್ಮ ಮಾಡದೆ, ಮನಸ್ಸು ಮಲೀನ ಮಾಡಿಕೊಳ್ಳದಿರುವುದು ಸ್ನಾನ.ಭಗವಂತನನ್ನು ಭಜಿಸುವುದು ಒಂದು ಸ್ನಾನ.ಕೇವಲ ದೇಹ ಶುದ್ಧಿ ಮಾಡಿಕೊಳ್ಳುವುದು ಸ್ನಾನವಲ್ಲ.ಜ್ಞಾನ ಸ್ನಾನ ಮಾಡಬೇಕು.ಧ್ಯಾನದಿಂದ ಮಾಧವನ ನೋಡುವುದೇ ಸ್ನಾನ,ಹಿರಿಯರ ದರ್ಶನ ಹಾಗೂ ಸೇವೆ ಮಾಡುವುದು ಸ್ನಾನ ಎಂದು ದಾಸರು ಬಣ್ಣಿಸಿದ್ದಾರೆ ಎಂದು ಶ್ರೀಗಳು ಪ್ರತಿಪಾದಿಸಿದರು.
ಹರಿದಾಸ ಸಾಹಿತ್ಯ ಪ್ರಚಾರ ವಾಹಿನಿಯ ಅಧ್ಯಕ್ಷ ಪಂ. ಗೋಪಾಲಾಚಾರ್ಯ ಅಕಮಂಚಿ, ಉಪಾಧ್ಯಕ್ಷ ವ್ಯಾಸರಾಜ ಸಂತೆಕೆಲ್ಲೂರ, ಸಂಚಾಲಕ ಬೆಂಕಿ ಭೀಮಣ್ಣ, ಮಠಾಧಿಕಾರಿ ರಾಮಾಚಾರ್ಯ ಘಂಟಿ ಹಾಗೂ ವಿವಿಧ ಮಹಿಳಾ ಭಜನಾ ಮಂಡಳಿಗಳ ಸದಸ್ಯೆಯರು ಪಾಲ್ಗೊಂಡಿದ್ದರು.



