ಹೊಸದಿಗಂತ ಡಿಜಿಟಲ್ ಡೆಸ್ಕ್:
2025ನೇ ಕ್ಯಾಲೆಂಡರ್ ವರ್ಷದಲ್ಲಿ ಭಾರತದ ಒಟ್ಟು ರಸಗೊಬ್ಬರ ಬೇಡಿಕೆಯ ಸುಮಾರು ಶೇ.73ರಷ್ಟು ಪಾಲನ್ನು ದೇಶೀಯ ಉತ್ಪಾದನೆಯ ಮೂಲಕವೇ ಪೂರೈಸಲಾಗಿದೆ ಎಂದು ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ ಹೇಳಿದೆ. ಆಮದು ರಸಗೊಬ್ಬರಗಳ ಮೇಲಿನ ಅವಲಂಬನೆ ಹೆಚ್ಚುತ್ತಿದೆ ಎಂಬ ವರದಿಗಳ ನಡುವೆಯೇ ಸರ್ಕಾರ ಈ ಮಾಹಿತಿ ನೀಡಿದೆ.
ಅಧಿಕೃತ ಹೇಳಿಕೆಯಂತೆ, 2025ರಲ್ಲಿ ದೇಶೀಯ ರಸಗೊಬ್ಬರ ಉತ್ಪಾದನೆ ಇತಿಹಾಸದಲ್ಲೇ ಗರಿಷ್ಠ ಮಟ್ಟ ತಲುಪಿದೆ. ಯೂರಿಯಾ, ಡಿಎಪಿ, ಎನ್‌ಪಿಕೆ ಮತ್ತು ಎಸ್‌ಎಸ್‌ಪಿ ಸೇರಿ ಒಟ್ಟು ಉತ್ಪಾದನೆ 2021ರಲ್ಲಿ 43.32 ಮಿಲಿಯನ್ ಟನ್ ಇದ್ದುದು, 2022ರಲ್ಲಿ 46.78 ಮಿಲಿಯನ್ ಟನ್‌ಗೆ ಏರಿಕೆಯಾಯಿತು. 2023ರಲ್ಲಿ ದೊಡ್ಡ ಜಿಗಿತ ಕಂಡು 50.79 ಮಿಲಿಯನ್ ಟನ್ ತಲುಪಿದ್ದು, 2024ರಲ್ಲಿ 50.95 ಮಿಲಿಯನ್ ಟನ್ ಹಾಗೂ 2025ರಲ್ಲಿ 52.46 ಮಿಲಿಯನ್ ಟನ್‌ಗೆ ಏರಿಕೆಯಾಗಿದೆ.
ಇದನ್ನೂ ಓದಿ: Food | ಸಿಹಿಯಾದ, ರುಚಿಯಾದ ಎರಿಯಪ್ಪ ಮನೆಯಲ್ಲಿ ಟ್ರೈ ಮಾಡಿದ್ದೀರಾ? ರೆಸಿಪಿ ಇಲ್ಲಿದೆ
ಇತ್ತ ಭಾರತೀಯ ರಸಗೊಬ್ಬರ ಸಂಘ (ಎಫ್‌ಎಐ) ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ, 2024-25 ಹಣಕಾಸು ವರ್ಷದ ಏಪ್ರಿಲ್-ನವೆಂಬರ್ ಅವಧಿಯಲ್ಲಿ ಯೂರಿಯಾ ಆಮದು ಶೇ.120ಕ್ಕಿಂತ ಹೆಚ್ಚು ಹೆಚ್ಚಾಗಿ 7.17 ಮಿಲಿಯನ್ ಟನ್‌ಗೆ ತಲುಪಿದೆ. ಇದೇ ಅವಧಿಯಲ್ಲಿ ದೇಶೀಯ ಯೂರಿಯಾ ಉತ್ಪಾದನೆ ಸ್ವಲ್ಪ ಕುಸಿತ ಕಂಡಿದೆ ಎಂದು ಎಫ್‌ಎಐ ಹೇಳಿದೆ.
ಸರ್ಕಾರವು ಕ್ಯಾಲೆಂಡರ್ ವರ್ಷವನ್ನು ಆಧಾರವಾಗಿ ತೆಗೆದುಕೊಂಡರೆ, ಎಫ್‌ಎಐ ಹಣಕಾಸು ವರ್ಷದ ಅಂಕಿಅಂಶಗಳನ್ನು ಮುಂದಿಟ್ಟಿದೆ. ಹೊಸ ಘಟಕಗಳ ಸ್ಥಾಪನೆ, ಸ್ಥಗಿತಗೊಂಡ ಘಟಕಗಳ ಪುನರುಜ್ಜೀವನ ಮತ್ತು ದೇಶೀಯ ಉತ್ಪಾದನೆಗೆ ನೀಡಿದ ಉತ್ತೇಜನವೇ ಈ ಬೆಳವಣಿಗೆಗೆ ಕಾರಣವೆಂದು ಸರ್ಕಾರ ಹೇಳಿದೆ.

