ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಮುಖ್ಯಮಂತ್ರಿ ಪಟ್ಟಕ್ಕಾಗಿ ಪೈಪೋಟಿ ತೀವ್ರವಾಗಿದೆ. ಕೆಲವು ನಾಯಕರು ಸಿದ್ದರಾಮಯ್ಯ ಇನ್ನು ಕೆಲವು ನಾಯಕರು ಡಿ.ಕೆ. ಶಿವಕುಮಾರ್ಗೆ ಬೆಂಬಲ ಸೂಚಿಸುತ್ತಿದ್ದಾರೆ.
ಇದೀಗ ಈ ರಾಜಕೀಯದಾಟಕ್ಕೆ ಸ್ವಾಮೀಜಿ ಎಂಟ್ರಿ ಕೊಟ್ಟಿದ್ದಾರೆ. ಶ್ರೀ ಆದಿಚುಂಚನಗಿರಿ ಮಠದ ಶಾಖಾ ಮಠಾಧೀಶರಾದ ನಂಜಾವಧೂತ ಸ್ವಾಮೀಜಿ ಇದೀಗ ಡಿ.ಕೆ. ಶಿವಕುಮಾರ್ ಪರ ಬ್ಯಾಟ್ ಬೀಸಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ಡಿಕೆಶಿಗೆ ಮುಖ್ಯಮಂತ್ರಿ ಹುದ್ದೆ ಬಿಟ್ಟು ಕೊಡಬೇಕು ಎಂದಿದ್ದಾರೆ.
ಪಕ್ಷದ ಹಿರಿಯರು ಕೊಟ್ಟ ಮಾತಿನಂತೆ ಡಿ.ಕೆ. ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಹುದ್ದೆ ನೀಡಬೇಕು ಎಂದು ಆಗ್ರಹಿಸಿದ್ದಾರೆ. ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳು ಒಳ್ಳೆಯದಲ್ಲ. ಈ ಗೊಂದಲಗಳು ಆಡಳಿತದ ಮೇಲೆ ಹಾಗೂ ಸಾಮಾನ್ಯರ ಮೇಲೆ ಪರಿಣಾಮ ಬೀರಬಾರದು ಎಂದು ಸ್ವಾಮೀಜಿ ಹೇಳಿದ್ದಾರೆ.
‘ಡಿಕೆಶಿ ಅವರಿಗೆ ಮುಖ್ಯಮಂತ್ರಿಯಾಗಲು ಅವಕಾಶ ನೀಡಬೇಕು ಎಂಬುದು ಒಕ್ಕಲಿಗ ಸಮುದಾಯದ ಪ್ರಬಲ ಆಶಯ. ಮಾತು ಕೊಟ್ಟಿದ್ದೇ ಆದರೆ, ಮಾತಿನಂತೆ ನಡೆದುಕೊಳ್ಳಬೇಕು. ಕೊಟ್ಟ ಮಾತಿಗೆ ತಪ್ಪಿ ನಡೆದರೆ ಮೆಚ್ಚನಾ ಪರಮಾತ್ಮನು ಎಂಬ ವಾಕ್ಯವನ್ನು ನಾವು ಪರಿಪಾಲಿಸಿಕೊಂಡು ಬಂದವರು. ಆ ಪಕ್ಷದ ಹಿರಿಯರು ಮಾತು ಕೊಟ್ಟಿದ್ದಾರೆ, ಅದನ್ನು ಉಳಿಸಿಕೊಳ್ಳಬೇಕುʼ ಎಂದು ಸೂಚಿಸಿದ್ದಾರೆ.
‘ಸಿದ್ದರಾಮಯ್ಯ ಉತ್ತಮ ಆಡಳಿತ ನಡೆಸಿಕೊಂಡು ಹೋಗುತ್ತಿದ್ದಾರೆ. ಅವರ ಆಡಳಿತದ ಬಗ್ಗೆ ಯಾವುದೇ ದೂರಿಲ್ಲ. 2ನೇ ಬಾರಿ ಸಿದ್ದರಾಮಯ್ಯ ಅಧಿಕಾರ ಸ್ವೀಕರಿಸಿ ಒಂದು ಅವಧಿ ಪೂರೈಸಿದ್ದಾರೆ. ಹೀಗಾಗಿ ಎರಡನೇ ಅವಧಿಯನ್ನು ಡಿಕೆಶಿ ಅವರಿಗೆ ನೀಡುತ್ತಾರೆ ಎಂದುಕೊಂಡಿದ್ದೇವು. ಹೀಗಂತ ಹೈಕಮಾಂಡ್ ಮಾತು ಕೊಟ್ಟಿದ್ದರೆ ಅದನ್ನು ಮರೆಯಬಾರದು. ಹೀಗಾಗಿ ಉಳಿದ ಎರಡೂವರೆ ವರ್ಷ ಡಿ.ಕೆ. ಶಿವಕುಮಾರ್ ಅವರಿಗೆ ನೀಡಿ”ಎಂದು ಪಕ್ಷದ ಹಿರಿಯರಿಗೆ ಸೂಚಿಸಿದ್ದಾರೆ.
ʼದೇವೇಗೌಡರು ಸಿಎಂ ಆಗಬೇಕಾದರೆ ಸಾಕಷ್ಟು ಸವಾಲುಗಳು ಎದುರಾದವು. ಅದಾದ ಬಳಿಕ ಸದಾನಂದ ಗೌಡ, ಎಸ್.ಎಂ. ಕೃಷ್ಣ ಕೂಡ ನೋವು ಅನುಭವಿಸಿದರು. ಕುಮಾರಸ್ವಾಮಿ ಮುಖ್ಯಮಂತ್ರಿ ಪಟ್ಟಕೇರಿದ ಬಳಿಕ ರೈತರ ಸಮಸ್ಯೆಗಳಿಗೆ ಸ್ಪಂದಿಸಿದರು. ಆದರೆ ಅವರೂ ಕೆಳಗಿಳಿಯಬೇಕಾಯಿತು. ಡಿ.ಕೆ. ಶಿವಕುಮಾರ್ ಕೂಡ ಒಕ್ಕಲಿಗ ಸಮುದಾಯದ ಅಗ್ರಗಣ್ಯ ನಾಯಕರು. ಹದಿನಾರು, ಹದಿನೇಳು ಜಿಲ್ಲೆಯ ಈ ಸಮುದಾಯದವರು ಡಿಕೆಶಿ ಅವರಿಗೆ ಸಿಎಂ ಪಟ್ಟ ಕೊಡಿ ಎಂದು ಆಗ್ರಹಿಸುತ್ತಿದ್ದಾರೆ’ ಎಂದು ಹೇಳಿದ್ದಾರೆ.

