March 7, 2026
Saturday, March 7, 2026
spot_img

ಸೀರೆ ಬೇಡ, ಗೌರವ ಧನ ನೀಡಿ: ಚಿತ್ರದುರ್ಗದಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಆಕ್ರೋಶ

ಹೊಸದಿಗಂತ ಚಿತ್ರದುರ್ಗ:

ಚುನಾವಣೆಗೂ ಮುನ್ನ ನೀಡಿದ್ದ ಭರವಸೆಯಂತೆ ಗೌರವ ಧನ ಹೆಚ್ಚಳ ಮಾಡುವಲ್ಲಿ ವಿಫಲವಾಗಿರುವ ರಾಜ್ಯ ಸರ್ಕಾರ, ಬಜೆಟ್‌ನಲ್ಲಿ ಕೇವಲ ‘ಸೀರೆ’ ನೀಡುವ ಮೂಲಕ ನಮಗೆ ಅವಮಾನ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಶನಿವಾರ ಬೃಹತ್ ಪ್ರತಿಭಟನೆ ನಡೆಸಿದರು.

ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಫೆಡರೇಷನ್ (ಎಐಟಿಯುಸಿ) ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ನಗರದ ಪ್ರವಾಸಿ ಮಂದಿರದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಮೆರವಣಿಗೆ ನಡೆಸಲಾಯಿತು. ಈ ಸಂದರ್ಭದಲ್ಲಿ ರಾಜ್ಯ ಸರ್ಕಾರದ ಕಾರ್ಮಿಕ ವಿರೋಧಿ ನೀತಿಯ ವಿರುದ್ಧ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು, ಶಿರಸ್ತೆದಾರ್ ಮಂಜುನಾಥ್ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ನೀಡಲಾಗಿದೆಯಾದರೂ, ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಕಾರ್ಯಕರ್ತೆಯರ ಬದುಕಿಗೆ ಯಾವುದೇ ಭದ್ರತೆ ನೀಡಿಲ್ಲ ಎಂದು ಪ್ರತಿಭಟನಾಕಾರರು ದೂರಿದರು.

ಆರನೇ ಗ್ಯಾರೆಂಟಿಯಾಗಿ ಗೌರವ ಧನ ಹೆಚ್ಚಿಸುವುದನ್ನು ಕೈಬಿಟ್ಟು ಸೀರೆ ಘೋಷಿಸಿರುವುದು ಹಾಸ್ಯಾಸ್ಪದ. ಸೀರೆಗಾಗಿ ವ್ಯಯಿಸುತ್ತಿರುವ ಹಣವನ್ನು ಗೌರವ ಧನ ಹೆಚ್ಚಳಕ್ಕೆ ಬಳಸಬೇಕು ಎಂದು ಒತ್ತಾಯಿಸಿದರು.

ಈ ಪ್ರತಿಭಟನೆಯಲ್ಲಿ ಎಐಟಿಯುಸಿ ಜಿಲ್ಲಾಧ್ಯಕ್ಷೆ ಎಸ್.ಭಾಗ್ಯಮ್ಮ, ಪ್ರಧಾನ ಕಾರ್ಯದರ್ಶಿ ಎಂ.ಸಾವಿತ್ರಮ್ಮ, ಖಜಾಂಚಿ ಪಿ.ಕೆ.ವಿನೋದಮ್ಮ ಹಾಗೂ ಮುಖಂಡರಾದ ಸತ್ಯಕೀರ್ತಿ, ಎನ್.ರಾಧಮ್ಮ, ಸುಮಿತ್ರಾಬಾಯಿ, ಕೆ.ಟಿ.ಸುಜಾತ ಸೇರಿದಂತೆ ನೂರಾರು ಅಂಗನವಾಡಿ ಕಾರ್ಯಕರ್ತೆಯರು ಭಾಗವಹಿಸಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !