ಕೊತ್ತಂಬರಿ ಸೊಪ್ಪು ನಮ್ಮ ಅಡುಗೆಯಲ್ಲಿ ಕೇವಲ ಅಲಂಕಾರಕ್ಕಾಗಿ ಮಾತ್ರವಲ್ಲ, ಆರೋಗ್ಯಕರ ಗುಣಗಳಿಂದ ಕೂಡಿದ ಹಸಿರು ಸೊಪ್ಪಾಗಿದೆ. ಇದರಲ್ಲಿ ಇರುವ ವಿಟಮಿನ್ C, ಆ್ಯಂಟಿ-ಆಕ್ಸಿಡೆಂಟ್ಸ್ ಹಾಗೂ ಜೀರ್ಣಶಕ್ತಿಯನ್ನು ಹೆಚ್ಚಿಸುವ ಗುಣಗಳು ದೇಹಕ್ಕೆ ತುಂಬಾ ಒಳ್ಳೆಯದು. ಈ ಕೊತ್ತಂಬರಿ ಸೊಪ್ಪಿನಿಂದ ತಯಾರಿಸುವ ವಡೆ ರುಚಿ ಮಾತ್ರವಲ್ಲದೆ, ಚಹಾ ಅಥವಾ ಕಾಫಿಯ ಜೊತೆ ಬಿಸಿಬಿಸಿ ತಿಂಡಿಗೆ ಸಕ್ಕತ್ ಬೆಸ್ಟ್.
ಬೇಕಾಗುವ ಪದಾರ್ಥಗಳು:
ಕೊತ್ತಂಬರಿ ಸೊಪ್ಪು – 1 ಕಪ್
ಕಡಲೆಬೇಳೆ – ½ ಕಪ್ (2 ಗಂಟೆ ನೀರಿನಲ್ಲಿ ನೆನೆಸಿದ್ದು)
ಹುರಿದ ಕಡಲೆಬೇಳೆ ಬೇಳೆ – 2 ಟೇಬಲ್ ಸ್ಪೂನ್
ಹಸಿಮೆಣಸು – 3-4
ಶುಂಠಿ – 1 ಇಂಚು
ಈರುಳ್ಳಿ – 1
ಜೀರಿಗೆ – 1 ಟೀ ಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಎಣ್ಣೆ – ಕರಿಯಲು
ತಯಾರಿಸುವ ವಿಧಾನ:
ಮೊದಲು ನೆನೆಸಿದ ಕಡಲೆಬೇಳೆಯನ್ನು ನೀರು ಹಾಕದೆ ಒಂದು ಜಾರಿನಲ್ಲಿ ಹಾಕಿ, ಜೊತೆಗೆ ಹಸಿಮೆಣಸು, ಶುಂಠಿ, ಜೀರಿಗೆ ಹಾಕಿ ಗಟ್ಟಿಯಾಗಿ ತರಿ ತರಿಯಾಗಿ ರುಬ್ಬಿಕೊಳ್ಳಿ. ಈಗ ಆ ಮಿಶ್ರಣಕ್ಕೆ ಕತ್ತರಿಸಿದ ಕೊತ್ತಂಬರಿ ಸೊಪ್ಪು, ಈರುಳ್ಳಿ, ಹುರಿದ ಕಡಲೆಬೇಳೆ ಹಾಗೂ ಉಪ್ಪು ಸೇರಿಸಿ ಚೆನ್ನಾಗಿ ಕಲಸಿ.
ಕೈಗೆ ಸ್ವಲ್ಪ ಎಣ್ಣೆ ಹಚ್ಚಿ, ಈ ಮಿಶ್ರಣವನ್ನು ಚಿಕ್ಕ ಚಿಕ್ಕ ಉಂಡೆಗಳಾಗಿ ಮಾಡಿ ತಟ್ಟೆಯ ಮೇಲೆ ಇಡಿ.
ಬಾಣಲೆಯಲ್ಲೇ ಎಣ್ಣೆ ಬಿಸಿ ಮಾಡಿ, ಸಿದ್ಧಪಡಿಸಿದ ಉಂಡೆಗಳನ್ನು ಸ್ವಲ್ಪ ಒತ್ತಿ ವಡೆ ಆಕಾರದಲ್ಲಿ ಬಿಟ್ಟು ಮಧ್ಯಮ ಉರಿಯಲ್ಲಿ ಬಂಗಾರದ ಬಣ್ಣ ಬರುವವರೆಗೂ ಹುರಿದರೆ ಬಿಸಿ ಬಿಸಿ ಕೊತ್ತಂಬರಿ ವಡೆ ರೆಡಿ.