ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣಾ ಕಣ ರಂಗೇರುತ್ತಿದ್ದು, ರಾಜಕೀಯ ಪಕ್ಷಗಳು ಗೆಲುವಿಗಾಗಿ ರಣತಂತ್ರ ರೂಪಿಸುತ್ತಿದೆ. ಆಡಳಿತರೂಢ ತೃಣಮೂಲ ಕಾಂಗ್ರೆಸ್ ಪಕ್ಷವೂ ಮತ್ತೊಮ್ಮೆ ಅಧಿಕಾರಕ್ಕೇರಲು 10 ಪ್ರತಿಜ್ಞೆ ಮಾಡಿಕೊಂಡಿದೆ.
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಶುಕ್ರವಾರ, ನಾವು ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ಜನರ ಮನೆ ಬಾಗಿಲಿಗೆ ಆರೋಗ್ಯ ಸೇವೆ ಒದಗಿಸಲಾಗುವುದು ಎಂದು ಘೋಷಿಸಿದ್ದಾರೆ. ಅದಕ್ಕಾಗಿ ‘ದುವಾರೆ ಚಿಕಿತ್ಸೆ’ ಜಾರಿಗೆ ತರುತ್ತೇವೆ ಎಂದು ತಿಳಿಸಿದರು.
ಅದೇ ರೀತಿ ಮಹಿಳೆರಿಗಾಗಿ ‘ಲಕ್ಷ್ಮಿ ಭಂಡಾರ್’ ಯೋಜನೆಯನ್ನು ಘೋಷಿಸಿದ್ದು, ಈ ಮೂಲಕ ಮಹಿಳೆಯರಿಗೆ ನೀಡುತ್ತಿರುವ ಮಾಸಿಕ ಆರ್ಥಿಕ ಸಹಾಯವನ್ನು 500 ರೂ. ಹೆಚ್ಚಿಸಲಾಗುವುದು. ಸಾಮಾನ್ಯ ವರ್ಗಕ್ಕೆ 1,500 ರೂ ಮತ್ತು SC/ST ಮಹಿಳೆಯರಿಗೆ 1,700 ರೂ ಲಭ್ಯವಾಗುವಂತೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ನಿರುದ್ಯೋಗಿ ಯುವಕರಿಗಾಗಿ ಯುವ-ಸಾಥಿ ಯೋಜನೆ ಜಾರಿಗೊಳಿಸುತ್ತೇವೆ. ಈ ಮೂಲಕ ಪ್ರತಿ ತಿಂಗಳು 1,500 ರೂ ಆರ್ಥಿಕ ಸಹಾಯ ನೀಡಲಿದ್ದೇವೆ ಎಂದು ತಿಳಿಸಿದರು.
ರೈತರಿಗಾಗಿ ಬೃಹತ್ ಕೃಷಿ ಬಜೆಟ್ ಘೋಷಿಸಿದ್ದು, ಇದರಲ್ಲಿ 30,000 ಕೋಟಿ ರೂಪಾಯಿಗಳ ಪ್ರತ್ಯೇಕ ಬಜೆಟ್ ಸ್ಥಾಪನೆ ಮತ್ತು ಭೂಹೀನ ರೈತರಿಗೆ ವಿಶೇಷ ಬೆಂಬಲ ನೀಡುವುದಾಗಿ ಹೇಳಿದ್ದಾರೆ.
ಮನೆಯಿಲ್ಲದ ಜನರಿಗೆ ಸ್ವಂತ ಮನೆ ಮತ್ತು ಕೊಳವೆ ಮೂಲಕ ಶುದ್ಧ ಕುಡಿಯುವ ನೀರು , ಸರ್ಕಾರಿ ಶಾಲೆಗಳ ಅಭಿವೃದ್ದಿ , ಬಂಗಾಳವನ್ನು ಭಾರತದ ಆರ್ಥಿಕ ಹಬ್ ಆಗಿ ಪರಿವರ್ತನೆ, ಹಿರಿಯ ನಾಗರಿಕರಿಗೆ ನಿರಂತರ ಪಿಂಚಣಿ, ರಾಜ್ಯದಲ್ಲಿ ಹೊಸ ಏಳು ಜಿಲ್ಲೆಗಳ ಸ್ಥಾಪನೆ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಸಂಖ್ಯೆ ಹೆಚ್ಚಳ ಮಾಡಲಾಗುವುದು ಎಂದು ತಿಳಿಸಿದರು.



