ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೆ ದೀಪಾವಳಿಯ ಸಂದರ್ಭದಲ್ಲಿ ಭರ್ಜರಿ ಉಡುಗೊರೆ ಸಿಕ್ಕಿದೆ! ರಾಜ್ಯ ಸರ್ಕಾರವು ನೌಕರರ ತುಟ್ಟಿ ಭತ್ಯೆಯನ್ನು ಶೇಕಡಾ 2ರಷ್ಟು ಹೆಚ್ಚಿಸಿ ಆದೇಶ ಹೊರಡಿಸಿದೆ.
ರಾಜ್ಯ ಸರ್ಕಾರಿ ನೌಕರರಿಗೆ 2025ರ ಜುಲೈ 1ರಿಂದ ಅನ್ವಯವಾಗುವಂತೆ ಶೇ. 2ರಷ್ಟು ತುಟ್ಟಿ ಭತ್ಯೆ ಹೆಚ್ಚಳ ಮಾಡಲಾಗಿದೆ, ಸದ್ಯದ ಮೂಲ ವೇತನದ ಶೇ. 12.25 ರಿಂದ ಶೇ. 14.25ಕ್ಕೆ ತುಟ್ಟಿಭತ್ಯೆಯ ದರ ಏರಿಕೆಯಾದಂತಾಗಿದೆ.
ಸಾಂಪ್ರದಾಯಿಕವಾಗಿ, ಕೇಂದ್ರ ಸರ್ಕಾರವು ತನ್ನ ನೌಕರರಿಗೆ ತುಟ್ಟಿ ಭತ್ಯೆ ಘೋಷಿಸಿದ ಬೆನ್ನಲ್ಲೇ ರಾಜ್ಯ ಸರ್ಕಾರವೂ ಏರಿಕೆ ಮಾಡುತ್ತದೆ. ಇದರಂತೆ, ವಿಜಯದಶಮಿಯ ಮುನ್ನ ದಿನ ಕೇಂದ್ರ ಸರ್ಕಾರವು ತನ್ನ ನೌಕರರಿಗೆ ಹೆಚ್ಚುವರಿ 3% ತುಟ್ಟಿ ಭತ್ಯೆ ನೀಡಲು ಅನುಮೋದನೆ ನೀಡಿತ್ತು.
ಬೆಲೆ ಏರಿಕೆಯ ಭಾರವನ್ನು ಸರಿದೂಗಿಸಲು ಮತ್ತು ನೌಕರರ ಖರೀದಿ ಸಾಮರ್ಥ್ಯವನ್ನು ಹೆಚ್ಚಿಸುವ ಉದ್ದೇಶದಿಂದ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಕೇಂದ್ರ ಸರ್ಕಾರಿ ನೌಕರರಿಗೆ ಹೆಚ್ಚುವರಿ ತುಟ್ಟಿ ಭತ್ಯೆಯ ಕಂತು ಮತ್ತು ಪಿಂಚಣಿದಾರರಿಗೆ ತುಟ್ಟಿ ಪರಿಹಾರ ನೀಡಲೂ ಸಹ ಒಪ್ಪಿಗೆ ನೀಡಲಾಗಿದೆ.