Saturday, October 18, 2025

ಕನ್ನೇರಿ ಶ್ರೀಗಳಿಗೆ ಡಬಲ್ ಶಾಕ್! ವಿಜಯಪುರ ಬಳಿಕ ಬಾಗಲಕೋಟೆ ಪ್ರವೇಶಕ್ಕೂ ನಿರ್ಬಂಧ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಹಾರಾಷ್ಟ್ರದಲ್ಲಿ ಲಿಂಗಾಯತ ಶ್ರೀಗಳ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ ಹಿನ್ನೆಲೆಯಲ್ಲಿ ವಿವಾದಕ್ಕೆ ಸಿಲುಕಿದ್ದ ಕೋಲ್ಹಾಪುರದ ಕನ್ನೇರಿ ಮಠದ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಶ್ರೀಗಳ ಜಿಲ್ಲಾ ಪ್ರವೇಶಕ್ಕೆ ಇದೀಗ ಬಾಗಲಕೋಟೆ ಜಿಲ್ಲಾಡಳಿತ ಸಹ ನಿರ್ಬಂಧ ವಿಧಿಸಿದೆ.

ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಚಿಕ್ಕಾಲಗುಂಡಿ ಗ್ರಾಮದಲ್ಲಿರುವ ಮಲ್ಲಿಕಾರ್ಜುನ ಮಠಕ್ಕೆ ಬರಬಾರದು ಹಾಗೂ ಜಿಲ್ಲೆಯನ್ನು ತಕ್ಷಣ ತೊರೆಯಬೇಕು ಎಂದು ಜಿಲ್ಲಾಧಿಕಾರಿ ಎಂ. ಸಂಗಪ್ಪ ಅವರು ಶ್ರೀಗಳಿಗೆ ನೋಟಿಸ್ ನೀಡಿದ್ದಾರೆ. ಕಾನೂನು ಮತ್ತು ಸುವ್ಯವಸ್ಥೆ ಹದಗೆಡುವ ಸಾಧ್ಯತೆ ಇದೆ ಎಂದು ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ.

ಪ್ರವೇಶ ನಿರ್ಬಂಧ ಮತ್ತು ನ್ಯಾಯಾಲಯದ ಆದೇಶ
ಲಿಂಗಾಯತ ಮಠಾಧೀಶರ ವಿರುದ್ಧದ ವಿವಾದಾತ್ಮಕ ಹೇಳಿಕೆ ವೈರಲ್ ಆದ ನಂತರ, ವಿಜಯಪುರ ಜಿಲ್ಲಾಡಳಿತವು ಕೂಡ ಕಾನೂನು ಸುವ್ಯವಸ್ಥೆಯ ಕಾರಣ ನೀಡಿ ಶ್ರೀಗಳ ಪ್ರವೇಶವನ್ನು ನಿರ್ಬಂಧಿಸಿತ್ತು. ಶ್ರೀಗಳು ಅಕ್ಟೋಬರ್ 16 ಮತ್ತು 17 ರಂದು ಬಸವನಬಾಗೇವಾಡಿಯಲ್ಲಿ ನಡೆಯಬೇಕಿದ್ದ ಸಮರ್ಥ ಸದ್ಗುರು ಶ್ರೀಸಿದ್ದರಾಮೇಶ್ವರ ಮಹಾರಾಜರ ಪುಣ್ಯತಿಥಿ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಬೇಕಿತ್ತು. ಆದರೆ ವಿಜಯಪುರ ಡಿಸಿ ಆದೇಶದಿಂದಾಗಿ ಅವರು ಚಿಕ್ಕಾಲಗುಂಡಿಯ ಮಠದಲ್ಲೇ ಉಳಿದುಕೊಳ್ಳಬೇಕಾಯಿತು.

ಇನ್ನು, ವಿಜಯಪುರ ಜಿಲ್ಲಾಧಿಕಾರಿಗಳ ಈ ಆದೇಶವನ್ನು ಕರ್ನಾಟಕ ಉಚ್ಛನ್ಯಾಯಾಲಯದ ಕಲಬುರಗಿ ಸಂಚಾರಿ ನ್ಯಾಯಪೀಠವು ಎತ್ತಿ ಹಿಡಿದಿದೆ. ಈ ನ್ಯಾಯಾಲಯದ ಆದೇಶದ ವಿವರಗಳನ್ನೂ ಒಳಗೊಂಡಂತೆ ಇದೀಗ ಬಾಗಲಕೋಟೆ ಜಿಲ್ಲಾಡಳಿತ ಸಹ ಜಿಲ್ಲೆಯಿಂದ ಹೊರಹೋಗುವಂತೆ ಆದೇಶಿಸಿದೆ.

ಭಕ್ತರ ತೀವ್ರ ವಿರೋಧ
ಜಿಲ್ಲಾಧಿಕಾರಿಗಳ ನೋಟಿಸ್ ಅನ್ನು ತಹಶೀಲ್ದಾರ್ ವಿನೋದ್ ಅವರು ಚಿಕ್ಕಾಲಗುಂಡಿ ಮಠಕ್ಕೆ ತೆರಳಿ ಕನ್ಹೇರಿ ಶ್ರೀಗಳಿಗೆ ನೀಡಿದ್ದಾರೆ. ಈ ಕ್ರಮದಿಂದಾಗಿ ಸ್ಥಳೀಯ ಭಕ್ತರಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಕಳೆದ ಎರಡು ದಿನಗಳಿಂದ ಮಠದಲ್ಲಿದ್ದ ಶ್ರೀಗಳನ್ನು ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ಸೇರಿದಂತೆ ಹಲವು ಗಣ್ಯರು ಭೇಟಿ ಮಾಡಿ ಧೈರ್ಯ ತುಂಬಿದ್ದರು.

error: Content is protected !!