Tuesday, October 21, 2025

ಗಡಿ ದಾಟುವ ಕನಸು ಭಗ್ನ: ಬೆಂಗಳೂರು-ಹೊಸೂರು ಮೆಟ್ರೋ ಸಂಪರ್ಕಕ್ಕೆ ತಾಂತ್ರಿಕ ಬ್ರೇಕ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರಿನಿಂದ ಹೊಸೂರಿಗೆ ಮೆಟ್ರೋ ಓಡಿಸುವ ಕನಸು ಇದೀಗ ತಾಂತ್ರಿಕ ಅಡೆತಡೆಗೆ ಸಿಲುಕಿದೆ. ಬಿಎಂಆರ್‌ಸಿಎಲ್ (BMRCL) ಪ್ರಕಟಿಸಿರುವ ಹೊಸ ವರದಿ ಪ್ರಕಾರ, ತಮಿಳುನಾಡು ಸರ್ಕಾರ ಮುಂದಿರಿಸಿದ್ದ ದಕ್ಷಿಣ ಭಾರತದ ಮೊದಲ ಅಂತಾರಾಜ್ಯ ಮೆಟ್ರೋ ಯೋಜನೆ ತಾಂತ್ರಿಕವಾಗಿ ಸಾಧ್ಯವಿಲ್ಲ ಎಂದು ತಿಳಿಸಿದೆ. ಈ ಹಿನ್ನೆಲೆಯಲ್ಲಿ ಯೋಜನೆ ತಾತ್ಕಾಲಿಕವಾಗಿ ಸ್ಥಗಿತಗೊಳ್ಳುವ ಸಾಧ್ಯತೆ ಇದೆ.

470 ಕಿಲೋಮೀಟರ್ ವಿಸ್ತಾರವನ್ನು ಗುರಿಯಾಗಿಸಿಕೊಂಡು ಕೇಂದ್ರ ಸರ್ಕಾರದ ಮಾರ್ಗದರ್ಶನದಲ್ಲಿ ಬಿಎಂಆರ್‌ಸಿಎಲ್ ವಿವಿಧ ವಿಸ್ತರಣೆಗಳ ಯೋಜನೆ ರೂಪಿಸಿದೆ. ಅದರ ಭಾಗವಾಗಿ ಹೊಸೂರು-ಬೊಮ್ಮಸಂದ್ರ 23 ಕಿಮೀ ಕಾರಿಡಾರ್‌ನ್ನು ಪರಿಶೀಲಿಸಿದಾಗ, ಎರಡೂ ರಾಜ್ಯಗಳ ಮೆಟ್ರೋ ವ್ಯವಸ್ಥೆಗಳಲ್ಲಿ ಬಳಕೆಯಾದ ವಿದ್ಯುತ್ ತಂತ್ರಜ್ಞಾನದಲ್ಲಿ ವ್ಯತ್ಯಾಸ ಇರುವುದರಿಂದ ಸಂಯೋಜನೆ ಅಸಾಧ್ಯ ಎಂದು ತಜ್ಞರು ಹೇಳಿದ್ದಾರೆ. ಚೆನ್ನೈ ಮೆಟ್ರೋ 25 kV AC ಶಕ್ತಿಯನ್ನು ಬಳಸುವಾಗ, ಬೆಂಗಳೂರು ಮೆಟ್ರೋ ವಿಭಿನ್ನ ತಂತ್ರಜ್ಞಾನವನ್ನು ಬಳಸುತ್ತದೆ.

ಹೀಗಾಗಿ ಬೊಮ್ಮಸಂದ್ರದಿಂದ ಹೊಸೂರಿನವರೆಗೆ ಮೆಟ್ರೋ ಮಾರ್ಗ ನಿರ್ಮಾಣ ಸಾಧ್ಯವಿಲ್ಲ ಎಂದು ಬಿಎಂಆರ್‌ಸಿಎಲ್ ಸ್ಪಷ್ಟಪಡಿಸಿದೆ. ಅಧಿಕಾರಿಗಳ ಪ್ರಕಾರ, ಈ ವಿಷಯವನ್ನು ಈಗಾಗಲೇ ರಾಜ್ಯ ಸರ್ಕಾರಕ್ಕೆ ತಿಳಿಸಲಾಗಿದೆ. ತಮಿಳುನಾಡು ಕೈಗಾರಿಕಾ ಅಭಿವೃದ್ಧಿಗಾಗಿ ಈ ಯೋಜನೆಯನ್ನು ಮುಂದಿಟ್ಟಿದ್ದರೂ, ಕರ್ನಾಟಕದ ಒಳಗೆ ಈ ಮಾರ್ಗಕ್ಕೆ ವಿರೋಧ ವ್ಯಕ್ತವಾಗಿದೆ.

error: Content is protected !!