Tuesday, December 30, 2025

ಚಳಿ ಅಂತ ಕಾರಿನೊಳಗೆ ಬೆಂಕಿ ಹಚ್ಚಿ ಮಲಗಿದ ಡ್ರೈವರ್: ಆಮೇಲೇನಾಯ್ತು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಚಳಿಗಾಲದ ಕಠಿಣತೆ ಪರ್ವತ ಪ್ರದೇಶಗಳಲ್ಲಿ ಜೀವನ ನಡೆಸುವುದನ್ನೇ ಸವಾಲಾಗಿ ಮಾಡಿಬಿಡುತ್ತದೆ. ಆದರೆ ಚಳಿಯಿಂದ ತಪ್ಪಿಸಿಕೊಳ್ಳಲು ತೆಗೆದುಕೊಳ್ಳುವ ಒಂದು ತಪ್ಪು ನಿರ್ಧಾರ, ಕೆಲವೊಮ್ಮೆ ಪ್ರಾಣವನ್ನೇ ಕಸಿದುಕೊಳ್ಳುವ ಅಪಾಯಕ್ಕೆ ಕಾರಣವಾಗುತ್ತದೆ. ಇಂತಹುದೇ ಒಂದು ಘಟನೆ ಉತ್ತರಾಖಂಡದ ನೈನಿತಾಲ್‌ನಲ್ಲಿ ನಡೆದಿದೆ.

ಉತ್ತರ ಪ್ರದೇಶದ ಮಥುರಾ ಮೂಲದ ಟ್ಯಾಕ್ಸಿ ಚಾಲಕ ಮಣೀಶ್ ಘಂಡಾರ್ ಅವರು ಡಿಸೆಂಬರ್ 27ರಂದು ನೋಯ್ಡಾದಿಂದ ಪ್ರಯಾಣಿಕರನ್ನು ಕರೆದುಕೊಂಡು ನೈನಿತಾಲ್‌ಗೆ ಆಗಮಿಸಿದ್ದರು. ಅದೇ ರಾತ್ರಿ ಸುಮಾರು 9 ಗಂಟೆಗೆ ಸುಖತಾಲ್ ಪಾರ್ಕಿಂಗ್ ಪ್ರದೇಶದಲ್ಲಿ ಕಾರು ನಿಲ್ಲಿಸಿದ್ದರು. ತೀವ್ರ ಚಳಿಯಿಂದ ರಕ್ಷಿಸಿಕೊಳ್ಳಲು ಕಾರಿನೊಳಗೆ ಸಣ್ಣ ಪ್ರಮಾಣದ ಇದ್ದಿಲಿನ ಬೆಂಕಿ ಹಚ್ಚಿ, ಕಿಟಕಿಗಳನ್ನು ಸಂಪೂರ್ಣ ಮುಚ್ಚಿಕೊಂಡು ಮಲಗಿದ್ದಾರೆ ಎನ್ನಲಾಗಿದೆ.

ಇದ್ದಿಲಿನ ಬೆಂಕಿಯಿಂದ ಹೊರಬಂದ ಕಾರ್ಬನ್ ಮೋನಾಕ್ಸೈಡ್ ಅನಿಲವು ಕಾರಿನೊಳಗೆ ಸಂಗ್ರಹಗೊಂಡು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಡಿಸೆಂಬರ್ 28ರ ಬೆಳಗ್ಗೆ ಚಾಲಕ ಚಲನವಲನ ಕಾಣದೆ ಇದ್ದಾಗ ಪಾರ್ಕಿಂಗ್ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಕಿಟಕಿ ಒಡೆದು ನೋಡಿದಾಗ ಮಣೀಶ್ ನಿರ್ಜೀವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಬಾಯಿಯಲ್ಲಿ ಬಿಳಿ ನೊರೆ ಕಾಣಿಸಿಕೊಂಡಿದ್ದು, ವಿಷಕಾರಿ ಅನಿಲದ ಪರಿಣಾಮ ಎಂದು ಶಂಕಿಸಲಾಗಿದೆ.

error: Content is protected !!