ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಾಮಾಜಿಕ ಜಾಲತಾಣಗಳ ಪ್ರಭಾವ ಮತ್ತು ಮಾದಕ ವಸ್ತುಗಳ ಜಾಲವು ಕುಟುಂಬಗಳನ್ನು ಹೇಗೆ ಕಂಗೆಡಿಸುತ್ತಿದೆ ಎಂಬುದಕ್ಕೆ ಗುಂಟೂರಿನಲ್ಲಿ ನಡೆದ ಘಟನೆ ಸಾಕ್ಷಿಯಾಗಿದೆ. ಅಪ್ರಾಪ್ತ ವಯಸ್ಕ ಮಗಳು ಮಾದಕ ವ್ಯಸನಿ ಎಂದು ತಿಳಿದ ಕ್ಷಣವೇ ತಾಯಿ ತೀವ್ರ ಮಾನಸಿಕ ಆಘಾತಕ್ಕೊಳಗಾಗಿ ಆತ್ಮಹತ್ಯೆಗೆ ಯತ್ನಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಘಟನೆ ಸ್ಥಳೀಯರಲ್ಲಿ ಆತಂಕ ಹಾಗೂ ಚರ್ಚೆಗೆ ಕಾರಣವಾಗಿದೆ.
ಪೊಲೀಸ್ ಮಾಹಿತಿಯಂತೆ, ಪ್ರಥಮ ವರ್ಷದ ಇಂಟರ್ಮೀಡಿಯೇಟ್‌ನಲ್ಲಿ ಓದುತ್ತಿದ್ದ ವಿದ್ಯಾರ್ಥಿನಿಗೆ ಇನ್‌ಸ್ಟಾಗ್ರಾಂ ಮೂಲಕ ಅದೇ ಕಾಲೇಜಿನ ಹಿರಿಯ ವಿದ್ಯಾರ್ಥಿಯೊಬ್ಬನ ಪರಿಚಯವಾಗಿತ್ತು. ಆನ್‌ಲೈನ್ ಸ್ನೇಹವು ಕ್ರಮೇಣ ಆಪ್ತತೆಗೆ ತಿರುಗಿದ್ದು, ಬಳಿಕ ಯುವಕ ಪ್ರೀತಿಯ ನೆಪದಲ್ಲಿ ಬಾಲಕಿಯನ್ನು ಮಾದಕ ವ್ಯಸನದತ್ತ ತಳ್ಳಿದ್ದಾನೆ ಎನ್ನಲಾಗಿದೆ. ಅಲ್ಲದೆ, ಆಕೆಯ ಅನುಮತಿಯಿಲ್ಲದೆ ಫೋಟೋ ಹಾಗೂ ವಿಡಿಯೋಗಳನ್ನು ದಾಖಲಿಸಿಕೊಂಡಿರುವ ಆರೋಪವೂ ಕೇಳಿಬಂದಿದೆ.
ಈ ಸಂಗತಿ ತಾಯಿಗೆ ತಿಳಿದಾಗ, ಮಗಳ ಮೊಬೈಲ್ ಪರಿಶೀಲಿಸಿ ಪ್ರಶ್ನಿಸಿದ ವೇಳೆ ಮನೆಯೊಳಗೆ ಗಂಭೀರ ಗಲಾಟೆ ನಡೆದಿದೆ. ಈ ಸಂದರ್ಭ ಬಾಲಕಿ ತಾಯಿಯ ಮೇಲೆ ಹಲ್ಲೆ ನಡೆಸಿದ್ದಾಳೆ ಎಂಬ ಆರೋಪವೂ ಇದೆ. ಮಗಳ ಭವಿಷ್ಯದ ಬಗ್ಗೆ ಭಾರೀ ಚಿಂತೆಗೊಳಗಾದ ತಾಯಿ ನಿದ್ರೆ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ತಕ್ಷಣ ಅವರನ್ನು ಗುಂಟೂರು ಸರ್ಕಾರಿ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ.
ಪ್ರಕರಣದ ತನಿಖೆ ನಡೆಸಲಾಗುತ್ತಿದ್ದು, ಅಪ್ರಾಪ್ತರಿಗೆ ಮಾದಕ ವಸ್ತು ಪೂರೈಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ವರಿಷ್ಠಾಧಿಕಾರಿ ರವಿಕೃಷ್ಣ ತಿಳಿಸಿದ್ದಾರೆ.


