April 10, 2026
Friday, April 10, 2026
spot_img

ಕುಡಿದ ಮತ್ತಿನಲ್ಲಿ ಆಟೋಗೆ ಡಿಕ್ಕಿ ಹೊಡೆದ ಪೊಲೀಸ್: ಯುವತಿ ಸ್ಥಳದಲ್ಲೇ ಸಾವು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹರಿಯಾಣದ ಅಂಬಾಲದಲ್ಲಿ ಕುಡಿದ ಮತ್ತಿನಲ್ಲಿ ಪೊಲೀಸ್ ಅಧಿಕಾರಿಯೊಬ್ಬರ ಕಾರು, ಇ-ರಿಕ್ಷಾಗೆ ಡಿಕ್ಕಿ ಹೊಡೆದ ಪರಿಣಾಮ 24 ವರ್ಷದ ಯುವತಿ ಸಾವನ್ನಪ್ಪಿದ ಘಟನೆ ನಡೆದಿದೆ.

ನಿಕಿತಾ ಮೃತ ದುರ್ದೈವಿ. ಆಕೆ ದೆಹಲಿಯಿಂದ ಅಂಬಾಲದಲ್ಲಿರುವ ತನ್ನ ಮನೆಗೆ ಪ್ರಯಾಣಿಸುತ್ತಿದ್ದಾಗ ಇ-ರಿಕ್ಷಾಗೆ ಪೊಲೀಸ್ ವಾಹನ ಡಿಕ್ಕಿ ಹೊಡೆಡಿದ್ದು, ಇದರಿಂದ ಆಕೆ ರಸ್ತೆಗೆ ಬಿದ್ದಿದ್ದಾಳೆ. ಪೊಲೀಸ್ ಅಧಿಕಾರಿಯು ಆಕೆಯ ಮೇಲೆಯೇ ತನ್ನ ವಾಹನದಿಂದ ಹರಿದ ಪರಿಣಾಮ ಸ್ಥಳದಲ್ಲೇ ಯುವತಿ ಸಾವಿಗೀಡಾಗಿದ್ದಾಳೆ.

ಇ-ರಿಕ್ಷಾ ಚಾಲಕ ರವೀಂದರ್ ಸಿಂಗ್ ಘಟನೆ ಕುರಿತು ಮಾಹಿತಿ ನೀಡಿದ್ದು, ನಾನು ಅಂಬಾಲಾ ಕಂಟೋನ್ಮೆಂಟ್‌ನಿಂದ ನನ್ನ ಇ-ರಿಕ್ಷಾದಲ್ಲಿ ನಾಲ್ವರು ಪ್ರಯಾಣಿಕರೊಂದಿಗೆ ಚಲಾಯಿಸುತ್ತಿದ್ದೆ. ಪೊಲೀಸ್ ಅಧಿಕಾರಿಯೊಬ್ಬರು ವೇಗವಾಗಿ ಚಲಿಸುತ್ತಿದ್ದ ಕಾರು, ನಮ್ಮ ಇ-ರಿಕ್ಷಾಗೆ ಡಿಕ್ಕಿ ಹೊಡೆದಿದ್ದು, ಪ್ರಯಾಣಿಕರಲ್ಲಿ ಒಬ್ಬ ಯುವತಿ ರಸ್ತೆಗೆ ಬಿದ್ದಳು. ನಂತರ, ಪೊಲೀಸ್ ಅಧಿಕಾರಿ ಯುವತಿಯ ಮೇಲೆಯೇ ಕಾರು ಹರಿಸಿದ್ದಾರೆ. ಆಕೆಯನ್ನು ಆಸ್ಪತ್ರೆಗೆ ಕರೆತಂದಾಗ, ಆಕೆ ಮೃತಪಟ್ಟಿದ್ದಾಳೆಂದು ಘೋಷಿಸಲಾಯಿತು ಎಂದು ಅವರು ಹೇಳಿದರು.

ಸ್ಥಳೀಯರು ಚಾಲಕನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ವಿಷಯದ ಕುರಿತು ಮಾತನಾಡಿದ ಸ್ಟೇಷನ್ ಹೌಸ್ ಆಫೀಸರ್ (SHO) ಧರ್ಮವೀರ್, ಪೊಲೀಸ್ ಸಬ್-ಇನ್ಸ್‌ಪೆಕ್ಟರ್ (ಪಿಎಸ್‌ಐ) ಅಮಿತ್ ಅವರನ್ನು ಬಲದೇವ್ ನಗರ ಔಟ್‌ಪೋಸ್ಟ್‌ನಲ್ಲಿ ರೈಡರ್ ಸಂಖ್ಯೆ 13 ಆಗಿ ನಿಯೋಜಿಸಲಾಗಿತ್ತು ಎಂದು ಹೇಳಿದರು. ಕುಡಿದ ಅಮಲಿನಲ್ಲಿದ್ದ ಪೊಲೀಸ್ ಅಧಿಕಾರಿ ವಾಹನದ ನಿಯಂತ್ರಣ ಕಳೆದುಕೊಂಡು ನಿಕಿತಾ ಮೇಲೆ ಹರಿದಿದ್ದು, ವಾಹನ ಹೆದ್ದಾರಿಯಲ್ಲಿನ ಗ್ರಿಲ್‌ಗೆ ಡಿಕ್ಕಿ ಹೊಡೆದಿದೆ. ಪೊಲೀಸರು ಚಾಲಕನನ್ನು ಬಂಧಿಸಿದ್ದು, ಪ್ರಕರಣ ದಾಖಲಿಸಲಾಗಿದೆ ಎಂದು ಅವರು ಹೇಳಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !