ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿಲಿಕಾನ್ ಸಿಟಿಯ ಗಾಳಿಯ ಗುಣಮಟ್ಟ ದಿನದಿಂದ ದಿನಕ್ಕೆ ಆತಂಕಕಾರಿಯಾಗಿ ಕುಸಿಯುತ್ತಿದೆ. ಇಂದಿನ ವರದಿಯ ಪ್ರಕಾರ, ನಗರದ ಸರಾಸರಿ ವಾಯು ಗುಣಮಟ್ಟ ಸೂಚ್ಯಂಕವು (AQI) 175 ದಾಖಲಾಗಿದ್ದು, ಇದು ಆರೋಗ್ಯದ ದೃಷ್ಟಿಯಿಂದ ಅತ್ಯಂತ ಕಳಪೆ ಮಟ್ಟವಾಗಿದೆ. ವಾತಾವರಣದಲ್ಲಿನ ಅತಿಸೂಕ್ಷ್ಮ ಧೂಳಿನ ಕಣಗಳಾದ PM2.5 ಪ್ರಮಾಣ 82 ಮತ್ತು PM10 ಪ್ರಮಾಣ 108 ರಷ್ಟಿದೆ.
ಕಳೆದ ಕೆಲವು ದಿನಗಳಿಗೆ ಹೋಲಿಸಿದರೆ ಅಲ್ಪ ಸುಧಾರಣೆ ಕಂಡಿದ್ದರೂ ಸಹ, ವಿಶ್ವ ಆರೋಗ್ಯ ಸಂಸ್ಥೆಯ ಮಾನದಂಡಗಳ ಪ್ರಕಾರ ಈ ಗಾಳಿಯು ಉಸಿರಾಟಕ್ಕೆ ಯೋಗ್ಯವಾಗಿಲ್ಲ. ಅದರಲ್ಲೂ ವಿಶೇಷವಾಗಿ ಕಲ್ಯಾಣ ನಗರದಲ್ಲಿ AQI 170 ದಾಟುವ ಮೂಲಕ ನಗರದ ಅತ್ಯಂತ ಕಲುಷಿತ ಪ್ರದೇಶವಾಗಿ ಹೊರಹೊಮ್ಮಿದೆ. ಎಂದಿನಂತೆ ವಾಹನ ದಟ್ಟಣೆಯ ಕೇಂದ್ರವಾದ ಸಿಲ್ಕ್ ಬೋರ್ಡ್ ಜಂಕ್ಷನ್ ನೈಟ್ರೋಜನ್ ಡೈಆಕ್ಸೈಡ್ ಮತ್ತು ಧೂಳಿನ ಕಣಗಳ ಆಗರವಾಗಿದೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಪರಿಸ್ಥಿತಿ ಇನ್ನೂ ಬಿಗಡಾಯಿಸುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಸಾರ್ವಜನಿಕರು ಹೊರಗಡೆ ಹೋಗುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸಲು ಹಾಗೂ ಮುಂಜಾನೆ ಮತ್ತು ಸಂಜೆಯ ಸಮಯದಲ್ಲಿ ಹೊರಾಂಗಣ ಚಟುವಟಿಕೆಗಳನ್ನು ಕಡಿಮೆ ಮಾಡಲು ಸೂಚಿಸಲಾಗಿದೆ.

