Wednesday, November 5, 2025

Viral | ಸಗಣಿ ಎರಚೋ ಹಬ್ಬ: ವಿದೇಶಿ ಯೂಟ್ಯೂಬರ್‌ನ ಅವಹೇಳನಕಾರಿ ವಿಡಿಯೋಗೆ ನೆಟ್ಟಿಗರ ಆಕ್ರೋಶ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕರ್ನಾಟಕದ ಚಾಮರಾಜನಗರದ ಗಡಿಭಾಗದಲ್ಲಿರುವ ಗುಮಟಾಪುರ ಗ್ರಾಮದಲ್ಲಿ ನಡೆಯುವ ವಿಶಿಷ್ಟ ಗೋರೆ ಹಬ್ಬ ಇದೀಗ ದೇಶದಷ್ಟೇ ಅಲ್ಲ, ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಚರ್ಚೆಯ ವಿಷಯವಾಗಿದೆ. ಹಸುವಿನ ಸಗಣಿಯನ್ನು ಪರಸ್ಪರ ಎರಚಾಡುವ ಈ ವಿಶಿಷ್ಟ ಸಂಪ್ರದಾಯದ ಹಬ್ಬದಲ್ಲಿ ಅಮೆರಿಕದ ಯೂಟ್ಯೂಬರ್ ಟೈಲರ್ ಒಲಿವೇರಾ ಪಾಲ್ಗೊಂಡು, ಭಾರತೀಯರನ್ನು ಅವಹೇಳನ ಮಾಡಿದ ವಿಡಿಯೋವನ್ನು ಅಪ್‌ಲೋಡ್ ಮಾಡಿದ ಪರಿಣಾಮ, ನೆಟ್ಟಿಗರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

ಗುಮಟಾಪುರದ ಬೀರೇಶ್ವರ ದೇವರು ಸಗಣಿಯಿಂದ ಹುಟ್ಟಿದ್ದಾರೆ ಎಂಬ ನಂಬಿಕೆಯ ಹಿನ್ನೆಲೆ ಈ ಹಬ್ಬದ ಮೂಲವಾಗಿದೆ. ಪ್ರತಿವರ್ಷ ದೀಪಾವಳಿಯ ಮರುದಿನ ಗ್ರಾಮಸ್ಥರು ಹಸುವಿನ ಸಗಣಿಯನ್ನು ಪರಸ್ಪರ ಎರಚಿಕೊಂಡು ದೇವರ ಗೌರವಕ್ಕಾಗಿ ಹಬ್ಬ ಆಚರಿಸುತ್ತಾರೆ. ಈ ಸಂಪ್ರದಾಯ ಶತಮಾನಗಳಿಂದ ಮುಂದುವರಿದು ಬಂದಿದೆ ಮತ್ತು ಇದು ಗ್ರಾಮೀಣ ಸಂಸ್ಕೃತಿಯ ಅವಿಭಾಜ್ಯ ಭಾಗವಾಗಿದೆ.

ವಿದೇಶಿ ಯೂಟ್ಯೂಬರ್‌ನ ವಿವಾದಾತ್ಮಕ ನಡೆ:
ಟೈಲರ್ ಒಲಿವೇರಾ ಎಂಬ ಅಮೆರಿಕದ ಯೂಟ್ಯೂಬರ್ ಹಬ್ಬದಲ್ಲಿ ಭಾಗವಹಿಸಿ ತನ್ನ ಅನುಭವದ ವಿಡಿಯೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ. ‘ನಾನು ಭಾರತದ ಮಲ ಎಸೆಯುವ ಉತ್ಸವದಿಂದ ಬದುಕುಳಿದೆ. ಇದು ತುಂಬಾ ಹೊಲಸು, ಇಲ್ಲಿಂದ ಹೊರಬರಬೇಕು’ ಎಂಬ ಶೀರ್ಷಿಕೆಯಲ್ಲಿ ಅವರು ಪೋಸ್ಟ್ ಮಾಡಿದ ವಿಡಿಯೋ ಮತ್ತು ಫೋಟೋಗಳು ಇದೀಗ ವಿವಾದಕ್ಕೆ ಕಾರಣವಾಗಿವೆ. ಈ ಪೋಸ್ಟ್ 50 ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿದ್ದು, ನೆಟ್ಟಿಗರಲ್ಲಿ ಭಾರಿ ಆಕ್ರೋಶ ಉಂಟಾಗಿದೆ.

ಅವರ ನಡೆ ಜನಾಂಗೀಯ ನಿಂದನೆ ಎಂದು ಅನೇಕರು ಖಂಡಿಸಿದ್ದಾರೆ. ಕೆಲವರು ಕಮೆಂಟ್ ಮಾಡುತ್ತಾ, “ಭಾರತೀಯರು ವಿಶ್ವದಾದ್ಯಂತ ತಂತ್ರಜ್ಞಾನ, ಶಿಕ್ಷಣ, ಮತ್ತು ಸ್ಟಾರ್ಟ್‌ಅಪ್ ಕ್ಷೇತ್ರದಲ್ಲಿ ಯಶಸ್ಸು ಸಾಧಿಸುತ್ತಿರುವಾಗ, ನೀವು ಸಂಸ್ಕೃತಿಯ ಮೌಲ್ಯಗಳನ್ನು ಹಾಸ್ಯ ಮಾಡುತ್ತಿದ್ದೀರಿ” ಎಂದು ಕಿಡಿ ಕಾರಿದ್ದಾರೆ. ಮತ್ತೊಬ್ಬರು “ಭಾರತಕ್ಕೆ ಬಂದು ಹಬ್ಬದಲ್ಲಿ ಭಾಗವಹಿಸಿ ನಂತರ ಅಸಹ್ಯವೆಂದರೆ ಅದು ನಿಮ್ಮ ಸಂಸ್ಕಾರಗಳ ಪ್ರತಿಫಲ” ಎಂದು ಟೀಕಿಸಿದ್ದಾರೆ.

ಸ್ಥಳೀಯರು ಮತ್ತು ನೆಟ್ಟಿಗರು ಒಟ್ಟಾಗಿ ಭಾರತೀಯ ಸಂಸ್ಕೃತಿ ಮತ್ತು ಹಬ್ಬಗಳ ಗೌರವ ಕಾಪಾಡಬೇಕೆಂದು ಕೋರಿದ್ದಾರೆ. ವಿದೇಶಿ ಮಾಧ್ಯಮ ಅಥವಾ ವ್ಯಕ್ತಿಗಳು ಸಂಪ್ರದಾಯಗಳನ್ನು ಅರ್ಥಮಾಡಿಕೊಳ್ಳದೇ ಅವುಗಳ ಕುರಿತು ಅಪಹಾಸ್ಯ ಮಾಡುವುದು ಅನಾದರದ ನಡೆ ಎಂದು ಹೇಳಿದ್ದಾರೆ.

error: Content is protected !!