ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿ–ಎನ್‌ಸಿಆರ್ ವಲಯದಲ್ಲಿ ಸೋಮವಾರ ರಾತ್ರಿ ಸುಮಾರು 9.22ರ ವೇಳೆಗೆ ರಿಕ್ಟರ್ ಮಾಪಕದಲ್ಲಿ 3.2 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ಮಾಹಿತಿ ನೀಡಿದೆ.
ಕೇವಲ 5 ಕಿಲೋಮೀಟರ್ ಆಳದಲ್ಲಿ ಕೇಂದ್ರಬಿಂದು ಇದ್ದ ಕಾರಣ ಕಂಪನಗಳು ದೆಹಲಿ, ಸೋನಿಪತ್, ರೋಹ್ಟಕ್, ಪಾನಿಪತ್ ಸೇರಿದಂತೆ ಸುತ್ತಮುತ್ತಲ ಹಲವೆಡೆ ಸ್ಪಷ್ಟವಾಗಿ ಅನುಭವಕ್ಕೆ ಬಂದಿವೆ ಎನ್ನಲಾಗಿದೆ. ಕಟ್ಟಡಗಳು ಅಲುಗಾಡುತ್ತಿದ್ದಂತೆ ಹಲವರು ಪ್ರಾಣಭಯದಿಂದ ಮನೆಗಳಿಂದ ಹೊರಗೆ ಓಡಿ ಬಂದಿದ್ದಾರೆ.
ಈ ಭೂಕಂಪದಿಂದ ಯಾವುದೇ ಜೀವಹಾನಿ ಅಥವಾ ಆಸ್ತಿ ಹಾನಿ ವರದಿಯಾಗಿಲ್ಲ ಎಂದು ಪೊಲೀಸ್ ಹಾಗೂ ಆಡಳಿತ ಮೂಲಗಳು ಸ್ಪಷ್ಟಪಡಿಸಿವೆ.
ಸೋನಿಪತ್ ಪ್ರದೇಶದಲ್ಲೇ ಎರಡು ತಿಂಗಳ ಹಿಂದೆ ಕೂಡ ಸಣ್ಣ ಪ್ರಮಾಣದ ಭೂಕಂಪ ಸಂಭವಿಸಿದ್ದ ಹಿನ್ನೆಲೆ ಆತಂಕ ಇನ್ನಷ್ಟು ಹೆಚ್ಚಿದೆ. ದೆಹಲಿ–ಎನ್‌ಸಿಆರ್ ಭೂಕಂಪ ವಲಯ–4ಕ್ಕೆ ಸೇರಿದ ಅಪಾಯದ ಪ್ರದೇಶವಾಗಿರುವುದರಿಂದ ಮುನ್ನೆಚ್ಚರಿಕೆ ಅತ್ಯಗತ್ಯವೆಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

