April 3, 2026
Friday, April 3, 2026
spot_img

ಆರ್ಥಿಕತೆಯ ‘ಸ್ಪೀಡೋಮೀಟರ್’ ಡೌನ್: ಭಾರತದ ಆರ್ಥಿಕ ವೇಗಕ್ಕೆ ‘ತೈಲ’ ಕಂಟಕ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಶ್ಚಿಮ ಏಷ್ಯಾದಲ್ಲಿ ಹೊತ್ತಿ ಉರಿಯುತ್ತಿರುವ ಯುದ್ಧದ ಜ್ವಾಲೆ ಕೇವಲ ಪ್ರಾದೇಶಿಕ ಸಮಸ್ಯೆ ಮಾತ್ರವಾಗಿ ಉಳಿಯದೆ, ಜಾಗತಿಕ ತೈಲ ಬಿಕ್ಕಟ್ಟಿಗೆ ನಾಂದಿ ಹಾಡಿದೆ. ಈ ಸಂಘರ್ಷ ದೀರ್ಘಕಾಲ ಮುಂದುವರಿದರೆ ಜಗತ್ತು ಆರ್ಥಿಕ ಹಿಂಜರಿತವನ್ನು ಎದುರಿಸಬೇಕಾದೀತು ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ಈ ಬಿಕ್ಕಟ್ಟಿನ ಬಿಸಿ ವೇಗವಾಗಿ ಬೆಳೆಯುತ್ತಿರುವ ಭಾರತದ ಆರ್ಥಿಕತೆಗೂ ತಟ್ಟುವ ಸಾಧ್ಯತೆ ದಟ್ಟವಾಗಿದೆ.

‘ಕೇರ್ ಎಡ್ಜ್ ರೇಟಿಂಗ್ಸ್’ ನೀಡಿರುವ ಇತ್ತೀಚಿನ ವರದಿ ಪ್ರಕಾರ, 2026-27ರ ಹಣಕಾಸು ವರ್ಷದಲ್ಲಿ ಕಚ್ಛಾ ತೈಲ ಬೆಲೆ ಏರಿಕೆಯು ಭಾರತದ ಪ್ರಗತಿಗೆ ಅಡ್ಡಿಯಾಗಬಹುದು. ಕಳೆದ ನಾಲ್ಕೈದು ತ್ರೈಮಾಸಿಕಗಳಿಂದ ಭಾರತದ ಜಿಡಿಪಿ ದರವು ಶೇ. 7ರ ಗಡಿಯನ್ನು ದಾಟುವ ವಿಶ್ವಾಸವಿತ್ತು. ಆದರೆ, ಇರಾನ್ ಯುದ್ಧದ ಪರಿಣಾಮ ತೈಲ ಬೆಲೆ ಏರಿಕೆಯಾದರೆ ಈ ನಿರೀಕ್ಷೆ ಹುಸಿಯಾಗಬಹುದು.

ತೈಲ ಬೆಲೆ ಮತ್ತು ಜಿಡಿಪಿ ನಡುವಿನ ಲೆಕ್ಕಾಚಾರ:

ತೈಲ ಬೆಲೆ ಈ ಮಟ್ಟದಲ್ಲಿದ್ದರೆ ಜಿಡಿಪಿ ಬೆಳವಣಿಗೆ ಶೇ. 7.2ರಷ್ಟು ಇರಲಿದೆ.

ಬ್ಯಾರಲ್ ಬೆಲೆ 100 ಡಾಲರ್ ದಾಟಿದರೆ ಜಿಡಿಪಿ ಶೇ. 6.5ಕ್ಕೆ ಕುಸಿಯಬಹುದು.

ಒಂದು ವೇಳೆ ಪರಿಸ್ಥಿತಿ ಬಿಗಡಾಯಿಸಿ ತೈಲ ಬೆಲೆ 120 ಡಾಲರ್ ತಲುಪಿದರೆ, ಪ್ರಗತಿ ದರ ಶೇ. 6ಕ್ಕಿಂತ ಕೆಳಕ್ಕೆ ಇಳಿಯುವ ಅಪಾಯವಿದೆ.

ತೈಲ ಬೆಲೆ ಏರಿಕೆಯು ನೇರವಾಗಿ ಪೆಟ್ರೋಲ್, ಡೀಸೆಲ್ ಮತ್ತು ಎಲ್‌ಪಿಜಿ ದರಗಳ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಸಾರಿಗೆ ವೆಚ್ಚ ಹೆಚ್ಚಾಗಿ ದಿನಬಳಕೆ ವಸ್ತುಗಳ ಬೆಲೆ ಗಗನಕ್ಕೇರಲಿದೆ.

ಸಾಮಾನ್ಯ ಸ್ಥಿತಿಯಲ್ಲಿ ಹಣದುಬ್ಬರ ಶೇ. 4.3 ಇರಬಹುದೆಂದು ಅಂದಾಜಿಸಲಾಗಿತ್ತು. ಆದರೆ, ತೈಲ ಬೆಲೆ 120 ಡಾಲರ್ ತಲುಪಿದರೆ ಹಣದುಬ್ಬರವು ಶೇ. 6.5ರ ಗಡಿ ದಾಟಿ ಜನಸಾಮಾನ್ಯರ ಜೇಬಿಗೆ ಕತ್ತರಿ ಬೀಳಲಿದೆ. ಒಟ್ಟಾರೆಯಾಗಿ, ಪಶ್ಚಿಮ ಏಷ್ಯಾದ ಶಾಂತಿ ಭಾರತದ ಆರ್ಥಿಕ ಸ್ಥಿರತೆಗೆ ಅತ್ಯಗತ್ಯವಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !