ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಳಗಾವಿಯಲ್ಲಿ ಹಲವು ಹೂಡಿಕೆದಾರರನ್ನು ವಂಚಿಸಿದ ಆರೋಪದ ಮೇಲೆ ಯಲ್ಲಪ್ಪ ಶಾಮ್ ಮಂಗುಟ್ಕರ್, ಶಿವಾನಂದ್ ದಾದು ಕುಂಭಾರ್ ಮತ್ತು ತಾನಾಜಿ ಶಾಮ್ ಮಂಗುಟ್ಕರ್ ವಿರುದ್ಧ ಜಾರಿ ನಿರ್ದೇಶನಾಲಯ(ED) ಡಿಸೆಂಬರ್ 16 ರಂದು ಮಂಗಳೂರಿನ ವಿಶೇಷ ನ್ಯಾಯಾಲಯದಲ್ಲಿ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಪ್ರಾಸಿಕ್ಯೂಷನ್ ದೂರು ದಾಖಲಿಸಿದೆ.
ಜಾರಿ ನಿರ್ದೇಶನಾಲಯದ ಮಂಗಳೂರು ಉಪ ವಲಯ ಕಚೇರಿಯು PMLA, 2002 ರ ಅಡಿಯಲ್ಲಿ ಈ ಮೂವರು ವಿರುದ್ಧ ಕೇಸ್ ದಾಖಲಿಸಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಿದೆ.
ಬೆಳಗಾವಿ ನಗರದ ಸೈಬರ್ ಅಪರಾಧ, ಆರ್ಥಿಕ ಅಪರಾಧಗಳು ಮತ್ತು ಮಾದಕ ದ್ರವ್ಯ ಅಪರಾಧ ಪೊಲೀಸ್ ಠಾಣೆಯಲ್ಲಿ ಹಿಂದಿನ ಭಾರತೀಯ ದಂಡ ಸಂಹಿತೆ, 1860 ರ ಸೆಕ್ಷನ್ 406 ಮತ್ತು 420 ರ ಅಡಿಯಲ್ಲಿ ಕುಂಭಾರ್ ಮತ್ತು ಮಂಗುಟ್ಕರ್ ವಿರುದ್ಧ ಇಡಿ ತನಿಖೆ ಆರಂಭಿಸಿದೆ ಎಂದು ತಿಳಿಸಿದೆ.
ಪ್ರಮುಖ ಆರೋಪಿಗಳಾದ ಯಲ್ಲಪ್ಪ ಶಾಮ್ ಮಂಗುಟ್ಕರ್ ಮತ್ತು ಶಿವಾನಂದ್ ದಾದು ಕುಂಭಾರ್, ತಾನಾಜಿ ಶಾಮ್ ಮಂಗುಟ್ಕರ್ ಅವರ ಸಹಾಯದಿಂದ, ಬೆಳಗಾವಿ ಮೂಲದ ಹಲವು ಹೂಡಿಕೆದಾರರಿಂದ ಸುಮಾರು 31.09 ಕೋಟಿ ರೂ. ಸಂಗ್ರಹಿಸಿರುವುದು ಇಡಿ ತನಿಖೆಯಿಂದ ತಿಳಿದುಬಂದಿದೆ.
ಕುಂಬಾರ್ ಅವರ ಉಕ್ಕು ಮತ್ತು ಸಿಮೆಂಟ್ ವ್ಯವಹಾರದಲ್ಲಿ ಈ ಹಣವನ್ನು ಬಳಸಿಕೊಳ್ಳಲು, ತಿಂಗಳಿಗೆ ಶೇ. 8 ವರೆಗೆ ಬಡ್ಡಿದರದ ಭರವಸೆ ನೀಡಿ, ಆರೋಪಿಗಳು ಹೂಡಿಕೆದಾರರಿಂದ ಹಣವನ್ನು ಸಂಗ್ರಹಿಸಿದ್ದಾರೆ ಎಂದು ಇಡಿ ಹೇಳಿದೆ.
ಆರೋಪಿಗಳು ಹೆಚ್ಚಾಗಿ ನಗದು ವಿಧಾನದ ಮೂಲಕ ಹೂಡಿಕೆದಾರರಿಂದ ಹಣವನ್ನು ಸಂಗ್ರಹಿಸಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ.

