ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಕಾವು ಏರುತ್ತಿದ್ದಂತೆ ರಾಜಕೀಯ ಬೆಳವಣಿಗೆಗಳು ತೀವ್ರ ಸ್ವರೂಪ ಪಡೆದುಕೊಂಡಿವೆ. ಇಂದು ಮುಂಜಾನೆಯೇ ಜಾರಿ ನಿರ್ದೇಶನಾಲಯ ಕೋಲ್ಕತ್ತಾದ ಹಲವು ಆಯಕಟ್ಟಿನ ಸ್ಥಳಗಳಲ್ಲಿ ದಾಳಿ ನಡೆಸುವ ಮೂಲಕ ರಾಜ್ಯ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿದೆ.
ತೃಣಮೂಲ ಕಾಂಗ್ರೆಸ್‌ನ ಚುನಾವಣಾ ತಂತ್ರಗಾರಿಕೆಯನ್ನು ರೂಪಿಸುವ ಪ್ರಮುಖ ಸಂಸ್ಥೆಯಾದ ಐ-ಪಿಎಸಿ ಕಚೇರಿ ಮತ್ತು ಅದರ ಹಿರಿಯ ಅಧಿಕಾರಿ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ನಗರದ ಒಟ್ಟು 5 ಕಡೆಗಳಲ್ಲಿ ತಪಾಸಣೆ ನಡೆಯುತ್ತಿದ್ದು, ಈವರೆಗೆ ಇಡಿ ಯಾವುದೇ ಅಧಿಕೃತ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ.
ದಾಳಿಯ ಸುದ್ದಿ ತಿಳಿಯುತ್ತಿದ್ದಂತೆ ಆಕ್ಷನ್ ಮೂಡ್‌ಗೆ ಇಳಿದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ನೇರವಾಗಿ ಐ-ಪಿಎಸಿ ಕಚೇರಿಗೆ ಧಾವಿಸಿದರು. ಅಲ್ಲಿಂದ ಅವರು ಅತ್ಯಂತ ಪ್ರಮುಖವಾದ ‘ಹಸಿರು ಬಣ್ಣದ ಕಡತ’ವೊಂದನ್ನು ಹೊತ್ತು ತರಾತುರಿಯಲ್ಲಿ ಹೊರಬಂದ ದೃಶ್ಯಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಈ ಫೈಲ್‌ನಲ್ಲಿ ಪಕ್ಷದ ಮುಂದಿನ ಚುನಾವಣಾ ರಹಸ್ಯಗಳಿವೆಯೇ ಎಂಬ ಕುತೂಹಲ ಮೂಡಿದೆ.
ಈ ದಾಳಿಯನ್ನು ತೀವ್ರವಾಗಿ ಖಂಡಿಸಿದ ಮಮತಾ ಬ್ಯಾನರ್ಜಿ, ಇದು ಬಿಜೆಪಿಯ ರಾಜಕೀಯ ಪ್ರೇರಿತ ಪಿತೂರಿ ಎಂದು ಕಿಡಿಕಾರಿದ್ದಾರೆ.
“ಬಿಜೆಪಿಗೆ ನಮ್ಮನ್ನು ಪ್ರಜಾಸತ್ತಾತ್ಮಕವಾಗಿ ಎದುರಿಸಲು ಶಕ್ತಿಯಿಲ್ಲ. ಅದಕ್ಕಾಗಿಯೇ ಇಡಿ ಅಸ್ತ್ರ ಬಳಸಿ ನಮ್ಮ ಕಾರ್ಯತಂತ್ರಗಳು ಮತ್ತು ಅಭ್ಯರ್ಥಿಗಳ ಮಾಹಿತಿ ಕದಿಯಲು ಪ್ರಯತ್ನಿಸುತ್ತಿದೆ. ಇದು ಗೃಹ ಸಚಿವರ ನೇರ ನಿರ್ದೇಶನದಂತೆ ನಡೆಯುತ್ತಿರುವ ಸರ್ವಾಧಿಕಾರಿ ಧೋರಣೆ,” ಎಂದು ಅವರು ಗುಡುಗಿದ್ದಾರೆ.
ಅಲ್ಲದೆ, ಮತದಾರರ ಪಟ್ಟಿಯಿಂದ ಹೆಸರುಗಳನ್ನು ಅಳಿಸುವ ಮೂಲಕ ಬಿಜೆಪಿ ಅಡ್ಡಹಾದಿಯಲ್ಲಿ ಚುನಾವಣೆ ಗೆಲ್ಲಲು ಯತ್ನಿಸುತ್ತಿದೆ ಎಂದು ಮಮತಾ ಗಂಭೀರ ಆರೋಪ ಮಾಡಿದ್ದಾರೆ.

