January21, 2026
Wednesday, January 21, 2026
spot_img

ಕಳಪೆ ಕಾಮಗಾರಿ ಎಫೆಕ್ಟ್: 33 ಹಳ್ಳಿಗಳ ದಾಹ ನೀಗಿಸಬೇಕಿದ್ದ ಟ್ಯಾಂಕ್ ಈಗ ಅವಶೇಷಗಳ ರಾಶಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಗುಜರಾತ್‌ನ ಸೂರತ್ ಜಿಲ್ಲೆಯಲ್ಲಿ ಭ್ರಷ್ಟಾಚಾರ ಮತ್ತು ಕಳಪೆ ಕಾಮಗಾರಿಯ ಜೀವಂತ ಸಾಕ್ಷಿಯೆಂಬಂತೆ, 21 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಬೃಹತ್ ನೀರಿನ ಟ್ಯಾಂಕ್ ಉದ್ಘಾಟನೆಗೂ ಮುನ್ನವೇ ಕುಸಿದು ಬಿದ್ದಿದೆ. ಜಿಲ್ಲೆಯ 33 ಗ್ರಾಮಗಳಿಗೆ ಕುಡಿಯುವ ನೀರು ಪೂರೈಸುವ ಮಹತ್ವಾಕಾಂಕ್ಷೆಯ ಯೋಜನೆಯು ಈ ಘಟನೆಯಿಂದಾಗಿ ದೊಡ್ಡ ಹಿನ್ನಡೆ ಅನುಭವಿಸಿದೆ.

ಜನವರಿ 19 ರಂದು ಮಧ್ಯಾಹ್ನ ಸುಮಾರು 12 ಗಂಟೆಯ ಸಮಯದಲ್ಲಿ, 15 ಮೀಟರ್ ಎತ್ತರದ ಮತ್ತು 11 ಲಕ್ಷ ಲೀಟರ್ ಸಾಮರ್ಥ್ಯದ ಈ ಟ್ಯಾಂಕ್‌ನ ಪ್ರಾಯೋಗಿಕ ಚಾಲನೆ ನಡೆಯುತ್ತಿತ್ತು. ಟ್ಯಾಂಕ್‌ಗೆ ಸುಮಾರು 9 ಲಕ್ಷ ಲೀಟರ್ ನೀರನ್ನು ತುಂಬಿಸಿದಾಗ, ಅದರ ಭಾರವನ್ನು ತಡೆದುಕೊಳ್ಳಲಾಗದೆ ಇಡೀ ಕಟ್ಟಡವು ಇದ್ದಕ್ಕಿದ್ದಂತೆ ಕುಸಿದು ಬಿದ್ದಿದೆ. ಈ ಭೀಕರ ಅಪಘಾತದಲ್ಲಿ ಮೂವರು ಕಾರ್ಮಿಕರು ಗಾಯಗೊಂಡಿದ್ದು, ಸ್ಥಳೀಯರಲ್ಲಿ ಆತಂಕ ಮತ್ತು ಆಕ್ರೋಶ ಮನೆಮಾಡಿದೆ.

ಯೋಜನೆಯು ಆರಂಭವಾಗುವ ಮೊದಲೇ ಈ ರೀತಿ ಕುಸಿದಿರುವುದು ನಿರ್ಮಾಣ ಸಾಮಗ್ರಿಗಳ ಗುಣಮಟ್ಟದ ಬಗ್ಗೆ ಗಂಭೀರ ಸಂಶಯಗಳನ್ನು ಹುಟ್ಟುಹಾಕಿದೆ. ಸಾರ್ವಜನಿಕರ ತೆರಿಗೆಯ 21 ಕೋಟಿ ರೂಪಾಯಿ ಹಣವು ನೀರಿನಲ್ಲಿ ಹೋಮ ಮಾಡಿದಂತಾಗಿದ್ದು, ಈ ಘಟನೆಯು ಈಗ ದೊಡ್ಡ ರಾಜಕೀಯ ಮತ್ತು ಭ್ರಷ್ಟಾಚಾರದ ವಿವಾದಕ್ಕೆ ನಾಂದಿ ಹಾಡಿದೆ.

ಸಂಬಂಧಪಟ್ಟ ಅಧಿಕಾರಿಗಳು ಮತ್ತು ಗುತ್ತಿಗೆದಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯ ನಿವಾಸಿಗಳು ಒತ್ತಾಯಿಸುತ್ತಿದ್ದಾರೆ.

Must Read