March 12, 2026
Thursday, March 12, 2026
spot_img

ಬೆಂಗಳೂರಿನಲ್ಲಿ ಮೊಟ್ಟೆ ಬಿಕ್ಕಟ್ಟು! ಬೆಲೆ ಗಗನಕ್ಕೆ, ಗ್ರಾಹಕರಿಗೆ ಬಿಸಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಏರಿಕೆಯ ನಡುವೆಯೇ, ಇದೀಗ ಕೋಳಿ ಮೊಟ್ಟೆ ಕೂಡ ಶ್ರೀಸಾಮಾನ್ಯರಿಗೆ ದುಬಾರಿಯಾಗಿದ್ದು, ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ತೀವ್ರ ಮೊಟ್ಟೆ ಕೊರತೆ ಎದುರಾಗಿದೆ. ಚಳಿಗಾಲದ ಬೇಡಿಕೆ, ಹಬ್ಬಗಳ ಸೀಸನ್ ಮತ್ತು ಪೂರೈಕೆ ಕೊರತೆಯಿಂದಾಗಿ ಮೊಟ್ಟೆಯ ಬೆಲೆಗಳು ಗಣನೀಯವಾಗಿ ಏರಿಕೆ ಕಂಡಿವೆ.

ಸಾಮಾನ್ಯವಾಗಿ ಗಡಗಡ ನಡುಗುವ ಚಳಿಗಾಲದಲ್ಲಿ ಮೊಟ್ಟೆ, ಚಿಕನ್ ಮತ್ತು ಫಿಶ್‌ಗೆ ಬೇಡಿಕೆ ಹೆಚ್ಚಿರುತ್ತದೆ. ಅದರಲ್ಲೂ ಹೆಚ್ಚಿನ ಸಂಖ್ಯೆಯ ಜನರು ಮೊಟ್ಟೆ ಉತ್ಪನ್ನಗಳನ್ನು ಸೇವಿಸಲು ಬಯಸುತ್ತಾರೆ. ಇದೇ ಸಮಯಕ್ಕೆ, ಮುಂಬರುವ ಕ್ರಿಸ್ಮಸ್ ಮತ್ತು ಹೊಸ ವರ್ಷಾಚರಣೆಗಾಗಿ ಕೇಕ್ ಉತ್ಪಾದನೆಯು ಹೆಚ್ಚಾಗಿ ನಡೆಯುತ್ತಿದ್ದು, ಮೊಟ್ಟೆಯ ಬಳಕೆ ಗಣನೀಯವಾಗಿ ಹೆಚ್ಚಾಗಿದೆ.

ಇದಕ್ಕೆ ಮತ್ತೊಂದು ಪ್ರಮುಖ ಕಾರಣವೆಂದರೆ, ಕಳೆದ ವರ್ಷ ಸಂಭವಿಸಿದ ಬರ್ಡ್ ಫ್ಲೂನಿಂದಾಗಿ ಕೋಳಿ ಸಾಕಾಣಿಕೆ ಮತ್ತು ಮೊಟ್ಟೆ ಉತ್ಪಾದನೆಯ ಪ್ರಮಾಣ ಕುಸಿತ ಕಂಡಿದೆ. ಈ ಎಲ್ಲ ಅಂಶಗಳು ಸೇರಿಕೊಂಡು ಬೆಂಗಳೂರಿನಲ್ಲಿ ಬೇಡಿಕೆಗೆ ತಕ್ಕಂತೆ ಮೊಟ್ಟೆಗಳ ಪೂರೈಕೆಯನ್ನು ಕುಂಠಿತಗೊಳಿಸಿವೆ.

ಕರ್ನಾಟಕ ಪೌಲ್ಟ್ರಿ ಟ್ರೇಡರ್ಸ್ ಅಸೋಸಿಯೇಷನ್‌ನ ಅಧ್ಯಕ್ಷರ ಪ್ರಕಾರ, ಬೆಂಗಳೂರಿಗೆ ಪ್ರತಿನಿತ್ಯ ಸುಮಾರು 1 ಕೋಟಿ 10 ಲಕ್ಷ ಮೊಟ್ಟೆಗಳು ಬೇಕಾಗುತ್ತವೆ. ಆದರೆ ಪ್ರಸ್ತುತ ಪರಿಸ್ಥಿತಿಯಲ್ಲಿ, ದಿನಕ್ಕೆ 30 ರಿಂದ 40 ಲಕ್ಷ ಮೊಟ್ಟೆಗಳ ಭಾರೀ ಕೊರತೆ ಉಂಟಾಗಿದೆ.

ಮೊದಲಿಗೆ ಒಂದು ಮೊಟ್ಟೆಗೆ 5 ಇತ್ತು, ಆದರೆ ಪೂರೈಕೆ ಕಡಿಮೆಯಾದ ಕಾರಣದಿಂದಾಗಿ ಈಗ ಪ್ರತಿ ಮೊಟ್ಟೆಯ ಬೆಲೆ 7 ರಿಂದ 8 ಕ್ಕೆ ದುಬಾರಿಯಾಗಿದೆ. ರಾಜ್ಯದ ಪೂರೈಕೆಯಲ್ಲಿ ಪ್ರಮುಖ ಪಾತ್ರ ವಹಿಸುವ ತಮಿಳುನಾಡಿನ ನಾಮಕಲ್‌ನಿಂದ ಪ್ರತಿನಿತ್ಯ ಸುಮಾರು 79 ಲಕ್ಷ ಮೊಟ್ಟೆಗಳು ರಫ್ತಾಗುತ್ತಿದ್ದು, ಇದು ಕರ್ನಾಟಕಕ್ಕೆ ಸಮರ್ಪಕ ಪೂರೈಕೆ ಆಗದಿರಲು ಒಂದು ಪ್ರಮುಖ ಕಾರಣವಾಗಿದೆ.

ಚಿಕನ್ ಬೆಲೆಯೂ ಏರಿಕೆ:

ಮೊಟ್ಟೆ ಮಾತ್ರವಲ್ಲದೆ ಕೋಳಿ ಬೆಲೆಯೂ ಏರಿಕೆ ಕಂಡಿದೆ. ಪ್ರಸ್ತುತ ಬಾಯ್ಲರ್ ಕೋಳಿ ಕೆ.ಜಿಗೆ 150 ಮತ್ತು ಫಾರಂ ಕೋಳಿ ಕೆ.ಜಿಗೆ 170 ಕ್ಕೆ ಏರಿಕೆಯಾಗಿದೆ.

ಈ ಬೆಲೆ ಏರಿಕೆಯ ಪರಿಣಾಮವಾಗಿ, ಕೋಳಿ ಮತ್ತು ಮೊಟ್ಟೆಯಿಂದ ತಯಾರಿಸುವ ಎಲ್ಲಾ ಆಹಾರ ಪದಾರ್ಥಗಳ ಬೆಲೆಗಳು ಹೆಚ್ಚಾಗುವ ಸಾಧ್ಯತೆ ಇದೆ. ಈ ಪರಿಸ್ಥಿತಿ ಇನ್ನೆರಡು-ಮೂರು ತಿಂಗಳುಗಳ ಕಾಲ ಮುಂದುವರೆಯುವ ಸಾಧ್ಯತೆ ಇದ್ದು, ಸದ್ಯಕ್ಕೆ ಮೊಟ್ಟೆ ಮತ್ತು ಕೋಳಿ ಬೆಲೆ ಇಳಿಕೆಯಾಗುವ ಯಾವುದೇ ಲಕ್ಷಣಗಳು ಗೋಚರಿಸುತ್ತಿಲ್ಲ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !