January17, 2026
Saturday, January 17, 2026
spot_img

ಮೊಟ್ಟೆ ಪ್ರಿಯರೇ ಆತಂಕ ಬೇಡ: ‘ಕ್ಯಾನ್ಸರ್ ಕಾರಕ’ ವದಂತಿಗೆ ಬ್ರೇಕ್ ಹಾಕಿದ FSSAI!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಮೊಟ್ಟೆಯ ಕುರಿತು ಹರಿದಾಡುತ್ತಿದ್ದ ಆತಂಕಕಾರಿ ವರದಿಗೆ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ತೆರೆ ಎಳೆದಿದೆ. ಮೊಟ್ಟೆಯಲ್ಲಿ ಕ್ಯಾನ್ಸರ್‌ಕಾರಕ ರಾಸಾಯನಿಕಗಳಿವೆ ಎಂಬುದು ಕೇವಲ ‘ಆಧಾರರಹಿತ ವದಂತಿ’ ಎಂದು ಪ್ರಾಧಿಕಾರ ಸ್ಪಷ್ಟಪಡಿಸಿದೆ.

ಯುಟ್ಯೂಬ್ ಚಾನಲ್ ಒಂದರಲ್ಲಿ ನಿರ್ದಿಷ್ಟ ಬ್ರ್ಯಾಂಡ್‌ನ ಮೊಟ್ಟೆಗಳಲ್ಲಿ ನೈಟ್ರೋಪ್ಯೂರಾನ್ ಎಂಬ ಅಪಾಯಕಾರಿ ರಾಸಾಯನಿಕ ಪತ್ತೆಯಾಗಿದೆ ಎಂದು ವರದಿಯಾಗಿತ್ತು. ಇದು ಸಾರ್ವಜನಿಕರಲ್ಲಿ ದೊಡ್ಡ ಮಟ್ಟದ ಆತಂಕ ಮೂಡಿಸಿತ್ತು. ಆದರೆ, ಈ ಕುರಿತು ಪರೀಕ್ಷೆ ನಡೆಸಿದ FSSAI, “ಈ ಆರೋಪಕ್ಕೆ ಯಾವುದೇ ವೈಜ್ಞಾನಿಕ ಸಾಕ್ಷ್ಯಗಳಿಲ್ಲ. ಜನರು ಇಂತಹ ದಾರಿತಪ್ಪಿಸುವ ವರದಿಗಳನ್ನು ನಂಬುವ ಅಗತ್ಯವಿಲ್ಲ” ಎಂದು ತಿಳಿಸಿದೆ.

2011ರ ಆಹಾರ ಸುರಕ್ಷತೆ ನಿಯಮದ ಪ್ರಕಾರ, ಕೋಳಿ ಸಾಕಣೆಯಲ್ಲಿ ನೈಟ್ರೋಪ್ಯೂರಾನ್ ಬಳಕೆಯನ್ನು ಈಗಾಗಲೇ ನಿಷೇಧಿಸಲಾಗಿದೆ.

ಒಂದು ವೇಳೆ ಪ್ರತಿ ಕೆ.ಜಿ.ಯಲ್ಲಿ 1.0 ಮೈಕ್ರೋಗ್ರಾಂ ವರೆಗೆ ಈ ಅಂಶ ಕಂಡುಬಂದರೂ ಅದರಿಂದ ಯಾವುದೇ ಆರೋಗ್ಯ ಅಪಾಯವಿಲ್ಲ ಎಂದು ತಜ್ಞರು ವಿವರಿಸಿದ್ದಾರೆ.

ವದಂತಿಗಳು ತೀವ್ರವಾದ ಬೆನ್ನಲ್ಲೇ ಕರ್ನಾಟಕ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದೆ. ಸರ್ಕಾರಿ ಪ್ರಯೋಗಾಲಯಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಕೊರತೆ ಇರುವುದರಿಂದ, ತಕ್ಷಣವೇ ಖಾಸಗಿ ಲ್ಯಾಬ್‌ಗಳಲ್ಲಿ ಮೊಟ್ಟೆಗಳ ಮಾದರಿಯನ್ನು ಪರೀಕ್ಷಿಸಲು ಆದೇಶಿಸಿದೆ. ಈ ಕುರಿತು ಸಮಗ್ರ ವರದಿಯನ್ನು ಒಂದು ವಾರದೊಳಗೆ ಸಲ್ಲಿಸುವಂತೆ ಸೂಚನೆ ನೀಡಲಾಗಿದೆ.

ಒಟ್ಟಿನಲ್ಲಿ, ಪ್ರಾಧಿಕಾರವು ಸದ್ಯಕ್ಕೆ ಮೊಟ್ಟೆ ತಿನ್ನುವುದು ಸುರಕ್ಷಿತ ಎಂದು ಹೇಳಿದ್ದರೂ, ರಾಜ್ಯ ಸರ್ಕಾರದ ಅಂತಿಮ ವರದಿ ಬಂದ ನಂತರವಷ್ಟೇ ಸಾರ್ವಜನಿಕರ ಗೊಂದಲ ಸಂಪೂರ್ಣವಾಗಿ ನಿವಾರಣೆಯಾಗಲಿದೆ.

Must Read

error: Content is protected !!