ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ಸರ್ಕಾರ ಅನುಮೋದನೆಗಾಗಿ ಕಳುಹಿಸಿದ್ದ ಒಟ್ಟು 22 ಮಸೂದೆಗಳ ಪೈಕಿ 18ಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಅಂಕಿತ ಹಾಕಿದ್ದಾರೆ. ಆದರೆ, ರಾಜಕೀಯವಾಗಿ ಭಾರಿ ಚರ್ಚೆಗೆ ಕಾರಣವಾಗಿದ್ದ ‘ದ್ವೇಷ ಭಾಷಣ ತಡೆ ಮಸೂದೆ’ಯನ್ನು ಬಾಕಿ ಉಳಿಸಿಕೊಂಡಿದ್ದು, ಇತರ ಎರಡು ಪ್ರಮುಖ ಮಸೂದೆಗಳ ಬಗ್ಗೆ ರಾಜ್ಯ ಸರ್ಕಾರದಿಂದ ಹೆಚ್ಚಿನ ಸ್ಪಷ್ಟನೆ ಕೇಳಿ ವಾಪಸ್ ಕಳುಹಿಸಿದ್ದಾರೆ.
ಈ ಕುರಿತು ಶುಕ್ರವಾರ (ಜ.9) ರಾಜ್ಯಪಾಲರ ವಿಶೇಷ ಕಾರ್ಯದರ್ಶಿಗಳು ಅಧಿಕೃತ ಪ್ರಕಟಣೆ ಹೊರಡಿಸಿದ್ದಾರೆ.
‘ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷಾಪರಾಧಗಳ ಪ್ರತಿಬಂಧಕ ವಿಧೇಯಕ’ಕ್ಕೆ ಸಹಿ ಹಾಕದಂತೆ ಬಿಜೆಪಿ ಮತ್ತು ವಿವಿಧ ಹಿಂದೂ ಪರ ಸಂಘಟನೆಗಳು ರಾಜ್ಯಪಾಲರಿಗೆ ಮನವಿ ಮಾಡಿದ್ದವು. ಈ ಹಿನ್ನೆಲೆಯಲ್ಲಿ ರಾಜ್ಯಪಾಲರು ಇದನ್ನು ತಡೆಹಿಡಿದಿದ್ದು, ಕಾನೂನು ತಜ್ಞರ ಸಲಹೆ ಪಡೆಯಲು ಮುಂದಾಗಿದ್ದಾರೆ. ಅಂತಿಮವಾಗಿ ಈ ಮಸೂದೆಯನ್ನು ರಾಷ್ಟ್ರಪತಿಗಳ ಅಂಕಿತಕ್ಕೆ ಕಳುಹಿಸುವ ಸಾಧ್ಯತೆಯೂ ದಟ್ಟವಾಗಿದೆ.
ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಹಂಚಿಕೆಗೆ (6+6+5 ಅನುಪಾತ) ಸಂಬಂಧಿಸಿದ ವಿಧೇಯಕವನ್ನು ರಾಜ್ಯಪಾಲರು ವಾಪಸ್ ಕಳುಹಿಸಿದ್ದಾರೆ. ಇಂದಿರಾ ಸಹಾನಿ ಪ್ರಕರಣದ ಅನ್ವಯ ಒಟ್ಟಾರೆ ಮೀಸಲಾತಿ ಪ್ರಮಾಣ ಶೇ. 50 ಮೀರಬಾರದು ಎಂಬ ಸುಪ್ರೀಂ ಕೋರ್ಟ್ ಆದೇಶವಿರುವುದರಿಂದ, ಈ ಬಗ್ಗೆ ಕಾನೂನಾತ್ಮಕ ಸ್ಪಷ್ಟನೆ ನೀಡುವಂತೆ ಸರ್ಕಾರಕ್ಕೆ ಸೂಚಿಸಿದ್ದಾರೆ.
ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರ ರಚನೆಗೆ ಸಂಬಂಧಿಸಿದ ಮಸೂದೆಯ ಬಗ್ಗೆಯೂ ರಾಜ್ಯಪಾಲರು ಹೆಚ್ಚಿನ ವಿವರಣೆಗಳನ್ನು ಕೋರಿದ್ದಾರೆ.
ರಾಜ್ಯಪಾಲರು ಕೇಳಿರುವ ಪ್ರಶ್ನೆಗಳಿಗೆ ಸರ್ಕಾರವು ಶೀಘ್ರದಲ್ಲೇ ಲಿಖಿತ ಸ್ಪಷ್ಟೀಕರಣ ನೀಡಲಿದ್ದು, ಆ ನಂತರವಷ್ಟೇ ಈ ಮಸೂದೆಗಳ ಭವಿಷ್ಯ ನಿರ್ಧಾರವಾಗಲಿದೆ.

