ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಣದ ವ್ಯವಹಾರ ಮತ್ತು ಆಸ್ತಿ ಜಗಳದ ಹಿನ್ನೆಲೆಯಲ್ಲಿ ವೃದ್ಧೆಯೊಬ್ಬರನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದ ಆರೋಪಿ, ಈಗ ಪೊಲೀಸರ ಕೈಗೆ ಸಿಗುವ ಮುನ್ನವೇ ನೇಣಿಗೆ ಶರಣಾಗಿರುವ ಘಟನೆ ನಡೆದಿದೆ.
ಬೆಂಗಳೂರಿನ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಕುದುರೆಗೆರೆ ಕಾಲೋನಿಯ ನಿವಾಸಿ ದಾಕ್ಷಾಯಿಣಮ್ಮ (55) ಎಂಬುವವರು ಕಳೆದ ಶನಿವಾರ ಭೀಕರವಾಗಿ ಹತ್ಯೆಗೀಡಾಗಿದ್ದರು. ಪತಿ ನಾಗರಾಜ್ ಅವರನ್ನು ಕಳೆದುಕೊಂಡು ಒಂಟಿಯಾಗಿ ವಾಸವಿದ್ದ ಇವರು, ತಮ್ಮ ಮಾವ ವೀರಭದ್ರಯ್ಯನ (60) ಜೊತೆ ಹಣಕಾಸು ಹಾಗೂ ಭೂ ವ್ಯವಹಾರದ ಸಂಬಂಧ ವೈಷಮ್ಯ ಹೊಂದಿದ್ದರು.
ಶನಿವಾರ ಮಧ್ಯಾಹ್ನ ದಾಕ್ಷಾಯಿಣಮ್ಮ ಅವರು ಮೊಮ್ಮಗನನ್ನು ಶಾಲೆಯಿಂದ ಕರೆತರಲು ಹೋಗುತ್ತಿದ್ದಾಗ, ಬೈಕ್‌ನಲ್ಲಿ ಬಂದಿದ್ದ ವೀರಭದ್ರಯ್ಯ ನಡುರಸ್ತೆಯಲ್ಲೇ ಕೊಡಲಿಯಿಂದ ಮನಬಂದಂತೆ ಕೊಚ್ಚಿ ಪರಾರಿಯಾಗಿದ್ದನು. ಈ ದೃಶ್ಯ ಜನರನ್ನು ಬೆಚ್ಚಿಬೀಳಿಸಿತ್ತು. ಅಂದಿನಿಂದ ಮಾದನಾಯಕನಹಳ್ಳಿ ಪೊಲೀಸರು ಈತನಿಗಾಗಿ ವ್ಯಾಪಕ ಜಾಲ ಬೀಸಿದ್ದರು.
ಪರಾರಿಯಾಗಿದ್ದ ವೀರಭದ್ರಯ್ಯ ಮಂಗಳವಾರ ತಡರಾತ್ರಿ ದೊಡ್ಡಬಳ್ಳಾಪುರ ತಾಲ್ಲೂಕಿನ ಕೊಳೂರು ಗ್ರಾಮದಲ್ಲಿದ್ದ ತನ್ನ ಅಕ್ಕನ ಮನೆಗೆ ಬಂದಿದ್ದನು. ಅಕ್ಕನ ಕ್ಷೇಮ ವಿಚಾರಿಸಿ ಹೊರಬಂದವನು ವಾಪಸ್ ಮನೆಗೆ ಹೋಗಲಿಲ್ಲ. ತಡರಾತ್ರಿ ತೋಟಕ್ಕೆ ತೆರಳಿ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬೆಳಗ್ಗೆ ಕುಟುಂಬಸ್ಥರು ಹುಡುಕಾಟ ನಡೆಸಿದಾಗ ಆತ ಹೆಣವಾಗಿ ಪತ್ತೆಯಾಗಿದ್ದಾನೆ.
ಸ್ಥಳಕ್ಕೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.


