March 22, 2026
Sunday, March 22, 2026
spot_img

ಮೂರನೇ ಸುತ್ತಿನ SIR ಗೆ ಚುನಾವಣಾ ಆಯೋಗ ಸಜ್ಜು: ಈ ಬಾರಿ ಕರ್ನಾಟಕ ಸೇರಿ 22 ರಾಜ್ಯಗಳ ಮೇಲೆ ಕಣ್ಣು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿಶೇಷ ತೀವ್ರ ಪರಿಷ್ಕರಣೆ (SIR) ಗೆ ಸಂಬಂಧಿಸಿದ ಮೂರನೇ ಹಂತವು ಏಪ್ರಿಲ್​​ನಿಂದ ಪ್ರಾರಂಭವಾಗುವ ಸಾಧ್ಯತೆಯಿದ್ದು, ಚುನಾವಣಾ ಆಯೋಗ ಗುರುವಾರ 22 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಈ ಕುರಿತು ತಿಳಿಸಿದೆ.

ಈ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಚುನಾವಣಾ ಅಧಿಕಾರಿಗಳಿಗೆ ಈ ನಿಟ್ಟಿನಲ್ಲಿ ಎಲ್ಲಾ ಪೂರ್ವಸಿದ್ಧತಾ ವ್ಯವಸ್ಥೆಗಳನ್ನು ಆದಷ್ಟು ಬೇಗ ಪೂರ್ಣಗೊಳಿಸಲು ಚುನಾವಣಾ ಸಮಿತಿಯು ಕೇಳಿಕೊಂಡಿದೆ.

ಮೂರನೇ ಹಂತದಲ್ಲಿ ಆಂಧ್ರಪ್ರದೇಶ, ಅರುಣಾಚಲ ಪ್ರದೇಶ, ಚಂಡೀಗಢ, ದಾದ್ರಾ ಮತ್ತು ನಗರ ಹವೇಲಿ ಮತ್ತು ದಮನ್ ಮತ್ತು ಡಿಯು, ಹರಿಯಾಣ, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಜಾರ್ಖಂಡ್, ಕರ್ನಾಟಕ, ಲಡಾಖ್, ಮಹಾರಾಷ್ಟ್ರ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ದೆಹಲಿ, ಒಡಿಶಾ, ಪಂಜಾಬ್, ಸಿಕ್ಕಿಂ, ತ್ರಿಪುರ, ತೆಲಂಗಾಣ ಮತ್ತು ಉತ್ತರಾಖಂಡದ ರಾಷ್ಟ್ರೀಯ ರಾಜಧಾನಿ ಪ್ರದೇಶ (NCT) ಗಳಲ್ಲಿ ಚುನಾವಣಾ ಸಮಿತಿಯು SIR ಪ್ರಕ್ರಿಯೆ ನಡೆಸಲಿದೆ.

ಈಕುರಿತು ಕೇಂದ್ರ ಚುನಾವಣಾ ಆಯೋಗದ ಕಾರ್ಯದರ್ಶಿ ಪವನ್ ದಿವಾನ್ ಆಯಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸಿಇಒಗಳನ್ನು ಉದ್ದೇಶಿಸಿ ಪತ್ರ ಬರೆದಿದ್ದು, ಜೂನ್ 24, 2025 ರ ಆದೇಶದ ಮೂಲಕ ಆಯೋಗವು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ನಡೆಸಲು ಆದೇಶಿಸಿದೆ. ಇದರ ಮುಂದುವರಿದ ಭಾಗವಾಗಿ, ಜುಲೈ 5, 2025 ರ ಪತ್ರದ ಮೂಲಕ ಆಯೋಗವು ಎಲ್ಲ ಸಿಇಒಗಳಿಗೆ (ಬಿಹಾರ ಹೊರತುಪಡಿಸಿ) SIR ಪ್ರಕ್ರಿಯೆಗಾಗಿ ಪೂರ್ವ ಪರಿಷ್ಕರಣೆ ಚಟುವಟಿಕೆಗಳನ್ನು ಪ್ರಾರಂಭಿಸಲು ನಿರ್ದೇಶಿಸಿದೆ.

ಅಕ್ಟೋಬರ್ 27, 2025ರಂದು ಪ್ರಾರಂಭಿಸಲಾದ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆ ಪ್ರಸ್ತುತ 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪ್ರಗತಿಯಲ್ಲಿದೆ ಎಂದು ಆಯೋಗ ಹೇಳಿದೆ. SIRನ ಮುಂದಿನ ಹಂತವು ಏಪ್ರಿಲ್ 2026 ರಲ್ಲಿ ಪ್ರಾರಂಭವಾಗಲಿದ್ದು, ಅಗತ್ಯ ಇರುವ ಎಲ್ಲಾ ಪೂರ್ವಸಿದ್ಧತಾ ಕಾರ್ಯಗಳನ್ನು ತ್ವರಿತಗೊಳಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !