ಹೊಸದಿಗಂತ ಡಿಜಿಟಲ್ ಡೆಸ್ಕ್:
ತಂತ್ರಜ್ಞಾನ, ರಾಕೆಟ್‌ಗಳು ಹಾಗೂ ಬೃಹತ್ ವ್ಯವಹಾರಗಳ ಮೂಲಕ ಸದಾ ಸುದ್ದಿಯಲ್ಲಿರುವ ಟೆಸ್ಲಾ ಮತ್ತು ಎಕ್ಸ್ ಸಿಇಒ ಎಲಾನ್ ಮಸ್ಕ್ ಇದೀಗ ಸಂಪೂರ್ಣ ವಿಭಿನ್ನ ಕಾರಣಕ್ಕೆ ಚರ್ಚೆಯ ಕೇಂದ್ರವಾಗಿದ್ದಾರೆ. ಈ ಬಾರಿ ಅವರ ಹೆಸರು ಸುದ್ದಿ ಮಾಡುತ್ತಿರುವುದು ಯಾವುದೇ ಹೊಸ ಯೋಜನೆಗಾಗಿ ಅಲ್ಲ, ತಮ್ಮ ಮಗನ ಹೆಸರಿನ ಮೂಲಕ.
ಇತ್ತೀಚೆಗೆ ಮಸ್ಕ್ ತಮ್ಮ ಎಕ್ಸ್ (ಹಳೆಯ ಟ್ವಿಟರ್) ಖಾತೆಯಲ್ಲಿ ಅವಳಿ ಮಕ್ಕಳೊಂದಿಗೆ ಇರುವ ಚಿತ್ರವನ್ನು ಹಂಚಿಕೊಂಡಿದ್ದರು. ಅದರಲ್ಲಿ ಮಗನ ಹೆಸರು ‘ಸ್ಟ್ರೈಡರ್ ಶೇಖರ್’ ಹಾಗೂ ಮಗಳ ಹೆಸರು ‘ಕಾಮೆಟ್ ಅಜೂರ್’ ಎಂದು ಬಹಿರಂಗಪಡಿಸಿದ್ದರು. ವಿಶೇಷವಾಗಿ ‘ಶೇಖರ್’ ಎಂಬ ಹೆಸರು ಭಾರತೀಯ ಸಂಪರ್ಕ ಹೊಂದಿರುವುದರಿಂದ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ಮಗನ ಮಧ್ಯದ ಹೆಸರು ‘ಶೇಖರ್’ ಅನ್ನು ಖ್ಯಾತ ಭಾರತೀಯ-ಅಮೇರಿಕನ್ ವಿಜ್ಞಾನಿ ಸುಬ್ರಹ್ಮಣ್ಯನ್ ಚಂದ್ರಶೇಖರ್ ಅವರ ಗೌರವಕ್ಕೆ ಇಟ್ಟಿರುವುದಾಗಿ ಮಸ್ಕ್ ತಿಳಿಸಿದ್ದಾರೆ. ಚಂದ್ರಶೇಖರ್ ಅವರು ಖಗೋಳಶಾಸ್ತ್ರದಲ್ಲಿ ಅಪಾರ ಕೊಡುಗೆ ನೀಡಿದ್ದು, 1983ರಲ್ಲಿ ಭೌತಶಾಸ್ತ್ರ ನೊಬೆಲ್ ಪ್ರಶಸ್ತಿಗೆ ಭಾಜನರಾಗಿದ್ದರು.
ಇದನ್ನೂ ಓದಿ: FOOD | ನಾಟಿ ಸ್ಟೈಲ್ ನುಗ್ಗೆ ಸೊಪ್ಪಿನ ಪಲ್ಯ ಮಾಡಿ! ರೆಸಿಪಿ ತುಂಬಾ ಸಿಂಪಲ್
ಇನ್ನು ‘ಸ್ಟ್ರೈಡರ್’ ಎಂಬ ಮೊದಲ ಹೆಸರು ಜೆ.ಆರ್.ಆರ್. ಟೋಲ್ಕಿನ್ ಅವರ ದಿ ಲಾರ್ಡ್ ಆಫ್ ದ ರಿಂಗ್ಸ್ ಕಾದಂಬರಿಯ ಅರಾಗೋರ್ನ್ ಪಾತ್ರದಿಂದ ಪ್ರೇರಿತವಾಗಿದೆ ಎನ್ನಲಾಗಿದೆ. ಮಸ್ಕ್ ಅವರ ಸಂಗಾತಿ ಶಿವೋನ್ ಗಿಲ್ಲಿಸ್ ಅವರಿಗೆ ಭಾರತೀಯ ಮೂಲದ ಕುಟುಂಬ ಹಿನ್ನೆಲೆ ಇರುವುದರಿಂದ ಈ ಹೆಸರಿಗೆ ಮತ್ತಷ್ಟು ಅರ್ಥ ಬಂದಿದೆ ಎಂಬ ಮಾತು ಕೂಡ ಕೇಳಿಬರುತ್ತಿದೆ.
ಈ ವಿಚಾರ ಬಹಿರಂಗವಾಗುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ವಿಶೇಷವಾಗಿ ಭಾರತೀಯ ಬಳಕೆದಾರರು ವಿಜ್ಞಾನಿ ಚಂದ್ರಶೇಖರ್ ಅವರ ಸಾಧನೆಗಳನ್ನು ಸ್ಮರಿಸಿ ಹೆಮ್ಮೆ ವ್ಯಕ್ತಪಡಿಸಿದ್ದಾರೆ.

