ಹೊಸದಿಗಂತ ಡಿಜಿಟಲ್ ಡೆಸ್ಕ್:
ಛತ್ತೀಸ್‌ಗಢದ ಗರಿಯಾಬಂದ್ ಜಿಲ್ಲೆಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಹಿರಿಯ ನಾಯಕ ಸೇರಿದಂತೆ 10 ನಕ್ಸಲೀಯರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.
ಹತ್ಯೆಯಾದವರಲ್ಲಿ ತಲೆಗೆ ರೂ. 1 ಕೋಟಿ ಬಹುಮಾನ ಘೋಷಿಸಲಾದ ಮಾವೋವಾದಿ ನಾಯಕ ಮೋಡೆಮ್ ಬಾಲಕೃಷ್ಣ ಅಲಿಯಾಸ್ ಮನೋಜ್ ಕೂಡಾ ಒಬ್ಬರಾಗಿದ್ದಾರೆ.
ಮೈನ್‌ಪುರ್ ಅರಣ್ಯ ಪ್ರದೇಶದಲ್ಲಿ ನಕ್ಸಲೀಯರು ಇರುವ ಬಗ್ಗೆ ದೊರೆತ ಗುಪ್ತಚರ ಮಾಹಿತಿಯ ಮೇರೆಗೆ ಇ-30, ಎಸ್‌ಟಿಎಫ್ ಮತ್ತು ಕೋಬ್ರಾ ಜಂಟಿ ತಂಡಗಳು ಹಿರಿಯ ಅಧಿಕಾರಿಗಳ ನಿರ್ದೇಶನದಂತೆ ನಕ್ಸಲ್ ವಿರೋಧಿ ಕಾರ್ಯಾಚರಣೆ ಪ್ರಾರಂಭಿಸಿವೆ.
ಬೆಳಗ್ಗೆಯಿಂದಲೇ ಭದ್ರತಾ ಪಡೆಗಳು ಮತ್ತು ನಕ್ಸಲೀಯರ ನಡುವೆ ಗುಂಡಿನ ಚಕಮಕಿ ನಡೆದಿದೆ. ಈ ವೇಳೆ ಹಲವು ಹಿರಿಯ ನಕ್ಸಲ್ ನಾಯಕರು ಸಾವನ್ನಪ್ಪಿರುವುದಾಗಿ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಕಾರ್ಯಾಚರಣೆಯಲ್ಲಿ ಸಿಆರ್‌ಪಿಎಫ್ ಕೋಬ್ರಾ ಕಮಾಂಡೋಗಳು ಮತ್ತು ಛತ್ತೀಸ್‌ಗಢ ಪೊಲೀಸ್ ಸಿಬ್ಬಂದಿ ಪಾಲ್ಗೊಂಡಿದ್ದರು. ಛತ್ತೀಸ್‌ಗಢದ ಗರಿಯಾಬಂದ್ ಜಿಲ್ಲೆಯಲ್ಲಿ ಹಿರಿಯ ನಕ್ಸಲ್ ನಾಯಕ ಮನೋಜ್ ಸೇರಿದಂತೆ 10 ನಕ್ಸಲೀಯರನ್ನು ಹೊಡೆದುರುಳಿಸಲಾಗಿದೆ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ.