ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಮ್ಮು ಮತ್ತು ಕಾಶ್ಮೀರದಲ್ಲಿ ಅಕ್ರಮವಾಗಿ ಒಳನುಸುಳಲು ಯತ್ನಿಸಿದ ಇಬ್ಬರು ಉಗ್ರರನ್ನು ಭದ್ರತಾ ಪಡೆ ಹೊಡೆದುರುಳಿಸಿದೆ. ಇದರಲ್ಲಿ ಓರ್ವ ‘ಮಾನವ ಜಿಪಿಎಸ್’ ಎಂದೇ ಕುಖ್ಯಾತಿ ಪಡೆದಿರುವ ಬಾಗು ಖಾನ್ ಹತ್ಯೆಯಾಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
‘ಸಮಂದರ್ ಚಾಚಾ’ ಎಂದೂ ಕರೆಯಲ್ಪಡುವ ಬಾಗು ಖಾನ್, 1995ರಿಂದ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ನೆಲೆಸಿದ್ದನು.
ಭದ್ರತಾ ಮೂಲಗಳ ಪ್ರಕಾರ, ಗುರೇಜ್ ವಲಯದ ವಿವಿಧ ಪ್ರದೇಶಗಳಿಂದ 100ಕ್ಕೂ ಹೆಚ್ಚು ನುಸುಳುಕೋರತನದ ಯತ್ನಗಳಿಗೆ ಬಾಗು ಖಾನ್ ಕಾರಣನಾಗಿದ್ದನು.
ಬಾಗು ಖಾನ್ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಕಮಾಂಡರ್ ಆಗಿದ್ದರೂ, ನಿಯಂತ್ರಣ ರೇಖೆಯುದ್ದಕ್ಕೂ ಇರುವ ಗುರೇಜ್ ಮತ್ತು ಅದರ ನೆರೆಯ ವಲಯಗಳಿಂದ ಉಗ್ರರ ಒಳನುಸುಳಿವಿಕೆ ಯಶಸ್ವಿಯಾಗಲು ಪ್ರತಿಯೊಂದು ಉಗ್ರ ಸಂಘಟನೆಗೂ ಸಹಾಯ ಮಾಡುತ್ತಿದ್ದನು. ಬಾಗು ಖಾನ್ ಭಯೋತ್ಪಾದಕ ಹಿಜ್ಬುಲ್ ಮುಜಾಹಿದ್ದೀನ್‌ನೊಂದಿಗೆ ಸಹ ಸಂಬಂಧ ಹೊಂದಿದ್ದ ಎಂದು ಮೂಲಗಳು ತಿಳಿಸಿವೆ.
ಒಳನುಸುಳುವಿಕೆ ಪ್ರಯತ್ನದ ಬಗ್ಗೆ ಜಮ್ಮು ಮತ್ತು ಕಾಶ್ಮೀರ ಪೊಲೀಸರು ನೀಡಿದ ಗುಪ್ತಚರ ಮಾಹಿತಿಯ ಆಧಾರದ ಮೇಲೆ, ಭಾರತೀಯ ಸೇನೆ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಗುರೆಜ್ ಸೆಕ್ಟರ್‌ನಲ್ಲಿ ಜಂಟಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು. ಈ ವೇಳೆ ಭಯೋತ್ಪಾದಕರು ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ. ಇದಕ್ಕೆ ಪ್ರತಿದಾಳಿಯಾಗಿ ಭದ್ರತಾ ಪಡೆ ಕೂಡ ಗುಂಡಿನ ದಾಳಿ ನಡೆಸಿ ಇಬ್ಬರು ಭಯೋತ್ಪಾದಕರನ್ನು ಹೊಡೆದುರುಳಿಸಿದೆ ಎಂದು ಚಿನಾರ್ ಕಾರ್ಪ್ಸ್ ಎಕ್ಸ್ನಲ್ಲಿ ತಿಳಿಸಿದೆ. ಬಾಗು ಖಾನ್ ಜೊತೆ ಹತ್ಯೆಯಾದ ಇನ್ನೊಬ್ಬ ಭಯೋತ್ಪಾದಕ ಕೂಡ ಪಾಕಿಸ್ತಾನಿ ಎಂದು ಮೂಲಗಳು ತಿಳಿಸಿವೆ.