ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಜೆಪಿ ಹಿರಿಯ ನಾಯಕ ಹಾಗೂ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರಿಗೆ ವಿದೇಶದಿಂದ ಮತ್ತೊಮ್ಮೆ ಜೀವ ಬೆದರಿಕೆ ಕರೆ ಬಂದಿದ್ದು, ಈ ಘಟನೆ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.
ಜನವರಿ 7ರಂದು ಅಪರಿಚಿತ ಮೂಲಗಳಿಂದ ವಿದೇಶಿ ಕರೆ ಬಂದ ಹಿನ್ನೆಲೆಯಲ್ಲಿ, ಈಶ್ವರಪ್ಪ ಅವರು ಇಂದು ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ನಿಖಿಲ್ ಅವರನ್ನು ಭೇಟಿ ಮಾಡಿದರು. ತಮ್ಮ ಜೀವಕ್ಕೆ ಅಪಾಯವಿರುವ ಕುರಿತು ಅಧಿಕೃತವಾಗಿ ದೂರು ದಾಖಲಿಸಿದ ಅವರು, ಸೂಕ್ತ ರಕ್ಷಣೆ ನೀಡುವಂತೆ ಮನವಿ ಮಾಡಿದ್ದಾರೆ.
ಹಿಂದೆಯೂ ಕೂಡ ಇಂತಹದ್ದೇ ಬೆದರಿಕೆ ಕರೆಗಳು ಬಂದಿದ್ದ ಕಾರಣ, ಈಶ್ವರಪ್ಪ ಅವರಿಗೆ ಪೊಲೀಸ್ ಭದ್ರತೆ ಮತ್ತು ಎಸ್ಕಾರ್ಟ್ ವ್ಯವಸ್ಥೆಯನ್ನು ಒದಗಿಸಲಾಗಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ರಾಜ್ಯ ಸರ್ಕಾರವು ಅವರ ಎಸ್ಕಾರ್ಟ್ ಹಾಗೂ ಪೊಲೀಸ್ ಭದ್ರತೆಯನ್ನು ಕಡಿತಗೊಳಿಸಿತ್ತು. ಭದ್ರತೆ ಹಿಂಪಡೆದ ಬೆನ್ನಲ್ಲೇ ಮತ್ತೆ ವಿದೇಶದಿಂದ ಬೆದರಿಕೆ ಬಂದಿರುವುದು ಆತಂಕಕ್ಕೆ ಕಾರಣವಾಗಿದೆ.
ವಿದೇಶಿ ಕರೆಗಳ ಮೂಲಕ ಬೆದರಿಕೆ ಸರಣಿ ಮುಂದುವರಿಯುತ್ತಿರುವುದರಿಂದ, ತಮಗೆ ಮೊದಲಿನಂತೆ ‘Y’ ಕೆಟಗರಿ ಭದ್ರತೆಯನ್ನು ತಕ್ಷಣವೇ ಮರುಸ್ಥಾಪಿಸಬೇಕೆಂದು ಈಶ್ವರಪ್ಪ ಅವರು ಸರ್ಕಾರವನ್ನು ಮತ್ತು ಪೊಲೀಸ್ ಇಲಾಖೆಯನ್ನು ಆಗ್ರಹಿಸಿದ್ದಾರೆ.


